ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯಾದರೆ ಅದು ಅಪರಾಧವಾಗಿದ್ದು, ಇದಕ್ಕಾಗಿ ವ್ಯಕ್ತಿಗೆ ಶಿಕ್ಷೆ ಆಗುತ್ತದೆ. ಕೇವಲ ಮಕ್ಕಳಾಗಲಿಲ್ಲ ಎಂದು ದಾಂಪತ್ಯ ಜೀವನ ಹಾಳು ಮಾಡಿಕೊಳ್ಳುವ ಬದಲು ದತ್ತು ಪಡೆಯಬಹುದು.
ಪತ್ನಿಯಿಂದ ಕ್ರೂರತೆ, ಹಿಂಸೆ ಆಗಿದ್ದರೆ ಮಾತ್ರ ಪತಿ ಆಕೆಯ ವಿರುದ್ಧ ವಿಚ್ಛೇದನದ ಪ್ರಕರಣ ಹಾಕಬಹುದು. ನ್ಯಾಯಾಲಯದಿಂದ ವಿಚ್ಛೇದನ ಆದೇಶ ಬಂದ ಬಳಿಕವೇ ಪತಿ ಇನ್ನೊಂದು ಮದುವೆ ಆಗಬಹುದು. ಅಲ್ಲಿಯವರೆಗೆ ಆಗುವಂತಿಲ್ಲ.
ಪತ್ನಿ ಮನೆಗೂ ಬಾರದೆ, ವಿಚ್ಚೇದನವೂ ನೀಡದಿದ್ದರೆ ಪತಿಗೆ ಇರುವ ದಾರಿಯೇನು?
ಪತಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಬಹುದು. ದಾಂಪತ್ಯ ಜೀವನದ ಸಾಂಗತ್ಯ ಕೊಡದಿರುವುದೂ ಕ್ರೂರತೆಯೇ ಆಗುತ್ತದೆ. ಅಲ್ಲದೆ, ಸಕಾರಣವಿಲ್ಲದೆ ಬಹಳ ವರ್ಷಗಳಿಂದ ಪತ್ನಿ ತನ್ನ ಪತಿಯಿಂದ ದೂರ ಇದ್ದರೆ, ಅದನ್ನು ಪತಿ ಸಾಬೀತುಪಡಿಸಿದರೆ ಆ ಆಧಾರದ ಮೇಲೂ ಪತಿಗೆ ವಿಚ್ಛೇದನ ಸಿಗುತ್ತದೆ.
ಅದಕ್ಕೂ ಮೊದಲು ದಂಪತಿಗಳು ತಾಲೂಕಿನ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ಭೇಟಿ ನೀಡಿ ದಾಂಪತ್ಯ ಸಮಸ್ಯೆ ಪರಿಹರಿಸಲು ಅರ್ಜಿ ಕೊಡಬಹುದು.