Heavy rain in Bangalore : ರಾಜಧಾನಿ ಬೆಂಗಳೂರಿನಾದ್ಯಂತ ಇಂದು ಬೆಳಗ್ಗೆಯಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೆಆರ್ ಮಾರುಕಟ್ಟೆ, ಓಕಳಿಪುರಂ ಸೇರಿದಂತೆ ಹಲವು ಕಡೆ ರಸ್ತೆ, ಅಂಡರ್ಪಾಸ್ಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾರೆ. HMT ಲೇಔಟ್ನಲ್ಲಿ ಬೃಹತ್ ಮರ ಧರೆಗುರುಳಿ ಕಾರೊಂದು ಸಂಪೂರ್ಣ ಜಖಂಗೊಂಡಿದೆ. ಜನಸಂಚಾರ ಕಡಿಮೆ ಇದ್ದಿದ್ದಕ್ಕೆ ದೊಡ್ಡ ಅನಾಹುತ ತಪ್ಪಿದೆ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹವಾಮಾನ ಇಲಾಖೆ 3 ದಿನ ಮಳೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಶೀಘ್ರ ಮುಕ್ತವಾಗಲಿದೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ರೋಡ್: ಪ್ರಯಾಣ ಸಮಯ ಉಳಿತಾಯ
ಸಂಜೆಯೊಳಗೆ ಮತ್ತೆ ಭಾರೀ ಮಳೆ
ರಾತ್ರಿಯಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ಸಂಜೆಯೊಳಗೆ ಮತ್ತೆ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ವರದಿಯೊಂದು ಹೇಳಿದೆ.
ಬೆಂಗಳೂರು ವೆದರ್ ಸಂಸ್ಥೆ ನೀಡಿರುವ ವರದಿಯನ್ವಯ ಬೆಂಗಳೂರಿನ ಮೇಲೆ ದಟ್ಟವಾದ ಮಳೆ ಮೋಡಗಳು ಆವರಿಸಿದ್ದು, ಇಂದು ಸಂಜೆಯೊಳಗೆ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮಧ್ಯಾಹ್ನದ ನಂತರ ತೀವ್ರವಾದ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ.