ಹಾವೇರಿ: ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವನ್ನಪ್ಪಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ನಗರದ ಖಾಸಗಿ ಆಸ್ಪತ್ರೆ ವೀರಾಪೂರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಸಮೀನಾ ಬಾನು(29) ಹೆಸರಿನ ಮಹಿಳೆ ಸಾವನ್ನಪ್ಪಿದ್ದು, ಆಸ್ಪತ್ರೆಯ ಬಳಿ ಮೃತ ಮಹಿಳೆಯ ಸಂಬಂಧಿಕರು ವೈದ್ಯರ ವಿರುದ್ಧ ಗದ್ದಲ ಎಬ್ಬಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ನಿವಾಸಿಯಾಗಿರುವ ಸಮೀನಾ ಶುಕ್ರವಾರ ಸಂಜೆ ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಿಂದ ನಗರದ ವೀರಾಪೂರ ಆಸ್ಪತ್ರೆಗೆ ದಾಖಲಾಗಿದ್ದರು. ಅಪೆಂಡಿಕ್ಸ್ ಕಾರಣ ಆಸ್ಪತ್ರೆಗೆ ಬಂದಿದ್ದ ಮಹಿಳೆಗೆ ವೈದ್ಯರು ಹಾಗೂ ಸಿಬ್ಬಂದಿ ಇಂಜೆಕ್ಷನ್ ಮಾಡಿದ್ದಾರೆ. ಈ ವೇಳೆ ಅಸ್ವಸ್ಥಗೊಂಡ ಮಹಿಳೆ ಕೊನೆಯುಸಿರೆಳೆದಿದ್ದಾಳೆ.
ವೈದ್ಯರು ಪರೀಕ್ಷೆ ಮಾಡದೇ ಇಂಜೆಕ್ಷನ್ ಮಾಡಿದ್ದೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಹಿಳೆಯು ಬೇಡ ಎಂದರೂ ಇಂಜೆಕ್ಷನ್ ಮಾಡಿದ್ದಾರೆಂದು ಆರೋಪಿಸಿದ್ದು, ನಮ್ಮ ಮಗಳ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಕಾರಣ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ಮಹಿಳೆ ಸಾವಿಗೆ ನ್ಯಾಯ ಬೇಕು, ಬರುವಾಗ ಆರಾಮವಾಗಿ ನಡೆದುಕೊಂಡು ಬಂದಿದ್ದಳು. ಈಗ ನಮ್ಮ ಸಮೀನಾ ಬಾನುಳನ್ನು ಸಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಪೋಲಿಸರ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.