ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ವಿದೇಶಿ ಮಹಿಳೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಗೋಕರ್ಣದ ಕುಡ್ಲೇ ಕಡಲತೀರದಲ್ಲಿ ನಡೆದಿದೆ. ರಷ್ಯಾ ಮೂಲದ ಜೈನ್(41) ರಕ್ಷಣೆಗೊಳಗಾದ ವಿದೇಶಿ ಮಹಿಳೆಯಾಗಿದ್ದಾರೆ.
ಬೆಂಗಳೂರಿನ ಕಮಲನಗರದ ಎಬಿನ್ ಡೇವಿಶ್(35) ಹಾಗೂ ಸಂಗಡಿಗರಾದ ಮಧುರ್ ಅಗರ್ವಾಲ್(35), ರಮ್ಯಾ ವೆಂಕಟರಮಣ(34) ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಸಂಜೆ ವೇಳೆಗೆ ಕುಡ್ಲೇ ಬೀಚ್‌ನಲ್ಲಿ ಮೂವರೂ ಈಜಲು ತೆರಳಿದ್ದ ವೇಳೆ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಹಂತದಲ್ಲಿದ್ದವರು ಸಹಾಯಕ್ಕಾಗಿ ಕೂಗಿದ್ದರು.
ಸಮುದ್ರದಲ್ಲಿ ಮುಳುಗುತ್ತಿದ್ದವರನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್ ಕುರ್ಲೆ, ಮಂಜುನಾಥ್ ಹರಿಕಂತ್ರ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿ ತಕ್ಷಣ ಧಾವಿಸಿ ಪ್ರವಾಸಿಗರ ರಕ್ಷಣೆ ಮಾಡಿದ್ದಾರೆ.