ಶಿವಮೊಗ್ಗ: ಮೈಮೇಲೆ ಬಿಸಿ ಚಹಾ ಚೆಲ್ಲಿ ಗಂಭೀರ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಕರುಳು ಹಿಂಡುವ ಘಟನೆ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹಿರೀಮನೆ ಗ್ರಾಮದಲ್ಲಿ ನಡೆದಿದೆ. ಹಿರೀಮನೆ ಗ್ರಾಮದ ರಾಜೇಶ ಹಾಗೂ ಅಶ್ವಿನಿ ದಂಪತಿಯ ಪುತ್ರ ಅಥರ್ವ(2) ದುರಂತ ಸಾವು ಕಂಡ ಪುಟ್ಟ ಮಗುವಾಗಿದೆ.
ಕಳೆದ ಅಕ್ಟೋಬರ್ 24 ರಂದು ಹಿರೀಮನೆ ಗ್ರಾಮದ ರಾಜೇಶ್ ಅವರ ಪಕ್ಕದ ಮನೆ ನಿವಾಸಿಯೊಬ್ಬರು ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ಅಶ್ವಿನಿ ಟೀ ಕೊಡಲು ರೆಡಿ ಮಾಡಿ ಇಟ್ಟಿದ್ದರು. ಆದರೆ ಈ ವೇಳೆ ಆಟವಾಡುತ್ತಾ ಬಂದಿದ್ದ ಮಗು ಅಥರ್ವ ಟೀ ಪಾತ್ರೆಯನ್ನು ಮೈಮೇಲೆ ಬೀಳಿಸಿಕೊಂಡಿದ್ದು ಗಂಭೀರವಾಗಿ ಗಾಯಗೊಂಡಿದ್ದ.
ಮಗುವಿಗೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದೊಂದು ವಾರದಿಂದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದು, ಆಸ್ಪತ್ರೆ ವೈದ್ಯರೂ ಕೈಯಲ್ಲಾದ ಪ್ರಯತ್ನ ನಡೆಸಿದ್ದರು. ಕುಟುಂಬಸ್ಥರು ಮಗು ಚೇತರಿಸಿಕೊಳ್ಳಲಿ ಎಂದು ಪ್ರತಿನಿತ್ಯ ದೇವರಲ್ಲಿ ಪ್ರಾರ್ಥಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲವಾಗಿದ್ದು, ಮಗು ಶುಕ್ರವಾರ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.