ಕಾರವಾರ: ಗೋವಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಖಾಸಗಿ ಬಸ್ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ತಾಲ್ಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ತುಮಕೂರು ಮೂಲದ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್(KA64 1554) ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಖಾಸಗಿ ಬಸ್ ಆಗಿದೆ.
ಗೋವಾಕ್ಕೆ ಪ್ರವಾಸಕ್ಕೆಂದು ಬಂದಿದ್ದ ಖಾಸಗಿ ಬಸ್‌ನಲ್ಲಿ ವಾಪಸ್ ತೆರಳುವ ವೇಳೆ ಗೋವಾ ಮದ್ಯವನ್ನು ತುಂಬಿಸಿಕೊಂಡು ತರಲಾಗುತ್ತಿತ್ತು. ಗೋವಾ ಕರ್ನಾಟಕ ಗಡಿಯ ಮಾಜಾಳಿ ಚೆಕ್‌ಪೋಸ್ಟ್‌ಗೆ ಬಸ್ ಆಗಮಿಸಿದಾಗ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಗೋವಾ ಮದ್ಯ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಬಸ್‌ನಲ್ಲಿ ಸುಮಾರು 73.50 ಲೀಟರ್ ಗೋವಾ ಮದ್ಯ ಹಾಗೂ 3.9 ಲೀಟರ್ ಗೋವಾ ಬಿಯರ್ ಸೇರಿ ಒಟ್ಟೂ 92,220 ರೂಪಾಯಿ ಮೌಲ್ಯದ ಅಕ್ರಮ ಮದ್ಯ ಪತ್ತೆಯಾಗಿದೆ. ಅಲ್ಲದೇ ಮದ್ಯ ಸಾಗಾಟಕ್ಕೆ ಬಳಸಿಕೊಳ್ಳಲಾದ ಬಸ್‌ನ ಮೌಲ್ಯ ಸುಮಾರು 25 ಲಕ್ಷ ರೂಪಾಯಿ ಇದ್ದು, ಒಟ್ಟೂ 26 ಲಕ್ಷ ಮೌಲ್ಯದ ಸ್ವತ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ಕಾರವಾರ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಕಾರವಾರ ಅಬಕಾರಿ ಉಪ ಅಧೀಕ್ಷಕ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅಕ್ರಮ ಮದ್ಯ ಸಾಗಾಟದ ಸಂಬಂಧ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.