ಭಟ್ಕಳ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಮುರ್ಡೇಶ್ವರದಲ್ಲಿ ವಾಸ್ತವ್ಯ ಹೂಡಿದ್ದ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಚನ್ನಪಟ್ಟಣ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ಇವತ್ತೇ ಹೇಳುತ್ತೇನೆ, ಎಲ್ಲ ಎಕ್ಸಿಟ್ ಪೋಲ್ ಭವಿಷ್ಯ ಸುಳ್ಳಾಗಲಿದೆ ಎಂದರು.
ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಮಹಾರಾಷ್ಟ್ರ ಚುನಾವಣೆಯಲ್ಲೂ ಮಾರ್ಜಿನ್‌ನಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು.
ಸಚಿವ ಜಮೀರ್ ಅಹ್ಮದ್ ಹೇಳಿಕೆಯಿಂದ ಚನ್ನಪಟ್ಟಣ ಕ್ಷೇತ್ರದ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಕುರಿತು ಪ್ರತಿಕ್ರಿಯಿಸಿದ ಅವರು, ಜಮೀರ್ ಒಳ್ಳೆಯ ಹುಡುಗ, ಒಳ್ಳೆಯ ಸಂಘಟಕನಾಗಿದ್ದಾನೆ. ಆದರೆ ಆತುರದಲ್ಲಿ ಕೆಲವೊಮ್ಮೆ ಮಾತನಾಡುತ್ತಾನೆ. ಪಕ್ಷದ ಅಧ್ಯಕ್ಷನಾಗಿ ನಾನು ವಾರದ ಹಿಂದೆಯೇ ಬುದ್ದಿವಾದ ಹೇಳಿದ್ದೇನೆ. ಇದೇ ಕೊನೆ, ಮತ್ತೆ ಈ ರೀತಿ ಆಗಲ್ಲ ಎಂದು ಜಮೀರ್ ಕ್ಷಮೆಯಾಚಿಸಿದ್ದಾಗಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.