ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ಲಡ್ಡು ಪ್ರಸಾದವನ್ನು ತಯಾರಿಸಲು ಪ್ರಾಣಿಗಳ ಕೊಬ್ಬಿನೊಂದಿಗೆ ತುಪ್ಪ ಬೆರೆಸಿ ಸರಬರಾಜು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) 4 ಜನರನ್ನು ಬಂಧಿಸಿದೆ.
ಎ.ಆರ್ ಡೈರಿ ಮಾಲೀಕ ಆ‌್ಯಂಡಿ ರಾಜಶೇಖರನ್, ಉತ್ತರ ಪ್ರದೇಶದ ಪರಾಗ ಡೈರಿ, ಪ್ರೀಮಿಯರ್ ಅಗ್ರೋ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಮಾಲೀಕರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ತಿರುಪತಿಯಲ್ಲಿ 3 ದಿನಗಳ ಕಾಲ ಪ್ರಶ್ನಿಸಲಾಗಿತ್ತು. ಆದರೆ ತನಿಖೆಯಲ್ಲಿ ಸಹಕರಿಸದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಆರೋಪಿಗಳನ್ನು ಇಂದು(ಸೋಮವಾರ) ತಿರುಪತಿಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ಲಡ್ಡು ಪ್ರಸಾದದ ತಯಾರಿಕೆಗಾಗಿ ಪ್ರಾಣಿಗಳ ಕೊಬ್ಬಿನೊಂದಿಗೆ ತುಪ್ಪವನ್ನು ಬೆರೆಸಿ ಸರಬರಾಜು ಮಾಡಿದ ಆರೋಪವನ್ನು ಬಂಧಿತರ ಮೇಲೆ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪ್ರಾಥಮಿಕ ಪುರಾವೆಗಳಿವೆ. ಉತ್ತರ ಭಾರತದ ರಾಜ್ಯಗಳಿಂದ ತುಪ್ಪವನ್ನು ಖರೀದಿಸಲು ಅವರು ಟಿಟಿಡಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ರಾಜಕೀಯ ಕೋಲಾಹಲಕ್ಕೆ ಕಾರಣವಾದ ತುಪ್ಪ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನವೆಂಬರ್ 2024 ರಲ್ಲಿ ಸಿಬಿಐ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತ್ತು.