ಗದಗ: ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್‌ನಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್ ಮರಳಿಸುವ ಮೂಲಕ ಬಸ್‌ನ ನಿರ್ವಾಹಕಿ ಮಾನವೀಯತೆ ಮೆರೆದ ಘಟನೆ ಗದಗದಲ್ಲಿ ನಡೆದಿದೆ. ತಾಲ್ಲೂಕಿನ ಮುಳಗುಂದದ ನಿವಾಸಿ ಶಕೀಲಾಬಾನು ಬ್ಯಾಗ್ ಬಿಟ್ಟು ತೆರಳಿದ್ದ ಪ್ರಯಾಣಿಕಳಾಗಿದ್ದಾಳೆ.
ಮುಳಗುಂದ ಪಟ್ಟಣದಿಂದ ಗದಗಕ್ಕೆ ಬಸ್ ಮೂಲಕ ಪ್ರಯಾಣಿಸಿದ್ದ ಶಕೀಲಾಬಾನು ಇಳಿಯುವಾಗ ಬ್ಯಾಗನ್ನು ಬಸ್‌ನಲ್ಲಿಯೇ ಮರೆತು ಬಿಟ್ಟುಹೋಗಿದ್ದರು. ಬಳಿಕ ಬ್ಯಾಗನ್ನು ಬಸ್‌ನ ನಿರ್ವಾಹಕಿ ಅನಸೂಯಾ ಪರಿಶೀಲಿಸಿದ್ದು, ಬ್ಯಾಗ್‌ನಲ್ಲಿ 30 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಮತ್ತು 2160 ರೂ. ನಗದು ಪತ್ತೆಯಾಗಿದೆ. ಕೂಡಲೇ ಬ್ಯಾಗನ್ನು ನಿರ್ವಾಹಕಿ ಅನಸೂಯಾ ತಮ್ಮ ವಿಭಾಗದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ಬ್ಯಾಗನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಪ್ಯಾನ್‌ಕಾರ್ಡ್ ಒಂದು ಪತ್ತೆಯಾಗಿದ್ದು, ಅದರ ಸಹಾಯದಿಂದ ಶಕೀಲಾಬಾನು ಪತ್ತೆಹಚ್ಚಿ ಬ್ಯಾಗ್ ಸಿಕ್ಕಿರುವ ಕುರಿತು ಮಾಹಿತಿ ನೀಡಿದ್ದಾರೆ. ಬ್ಯಾಗ್ ಕಳೆದುಕೊಂಡು ಆತಂಕದಲ್ಲಿದ್ದ ಮಹಿಳೆಗೆ ಹೋದ ಜೀವ ವಾಪಸ್ ಬಂದಂತಾಗಿದ್ದು, ಬಳಿಕ ಬೆಟಗೇರಿ ಪೊಲೀಸರ ಸಮ್ಮುಖದಲ್ಲಿ ಮಹಿಳೆಗೆ ನಿರ್ವಾಹಕಿಯ ಹಸ್ತದಿಂದಲೇ ಚಿನ್ನಾಭರಣ ಹಾಗೂ ಹಣವಿದ್ದ ಬ್ಯಾಗನ್ನು ಮರಳಿಸಿದ್ದಾರೆ. ನಿರ್ವಾಹಕಿ ಅನಸೂಯಾ ಪ್ರಾಮಾಣಿಕತೆಗೆ ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.