ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆ ಈಗ ವಿದ್ಯುತ್ ಶಾಕ್‌ಗೆ ಸಿದ್ಧರಾಗಬೇಕಾಗಿದೆ. ರಾಜ್ಯದ ಜನರಿಗೆ ವಿದ್ಯುತ್ ದರ ಹೆಚ್ಚಳದ ಶಾಕ್ ನೀಡಲು ಎಸ್ಕಾಮ್‌ಗಳು ಮುಂದಾಗಿವೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ESCOMs) ವಿದ್ಯುತ್ ದರ ಏರಿಕೆ ಮಾಡಲು ಒಪ್ಪಿಗೆ ಸೂಚಿಸುವಂತೆ ಪ್ರಸ್ತಾಪ ಸಲ್ಲಿಸಿವೆ.
ಮುಂದಿನ ಮೂರು ವರ್ಷಗಳ ಅವಧಿಗೆ ಹೆಚ್ಚಾಗಲಿರುವ ವಿದ್ಯುತ್ ದರದ ವಿವರವನ್ನು ಹಂಚಿಕೊಂಡಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ವಿದ್ಯುತ್ ದರ ಹೆಚ್ಚಿಸುವಂತೆ ಕೆಇಆರ್‌ಸಿಗೆ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕಾಂ ಈಗಾಗಲೇ ಪ್ರಸ್ತಾವನೆಗಳನ್ನು ಸಲ್ಲಿಸಿವೆ.
ವಿದ್ಯುತ್ ಖರೀದಿಗೆ ತಗಲುವ ವೆಚ್ಚ ಹಾಗೂ ಪೂರೈಕೆ, ಕಲ್ಲಿದ್ದಲು ಸಂಗ್ರಹಣೆಗೆ ತಗಲುವ ವೆಚ್ಚ ಸೇರಿದಂತೆ ಇತರೆ ಖರ್ಚುಗಳು ಹೆಚ್ಚಾಗಿದ್ದು ಆರ್ಥಿಕ ಒತ್ತಡವನ್ನು ಉಲ್ಬಣಗೊಳಿಸಿವೆ ಎಂದು ಪ್ರಸ್ತಾವನೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಹೇಳಿಕೊಂಡಿವೆ. ಹೀಗಾಗಿ ಪ್ರತಿ ಯೂನಿಟ್‌ಗೆ 1 ರೂಪಾಯಿ 50 ಪೈಸೆ ದರ ಏರಿಕೆ ಮಾಡುವಂತೆ ಬೆಸ್ಕಾಂ ಮನವಿ ಮಾಡಿದರೆ, ಇತರೆ ಎಸ್ಕಾಮ್‌ಗಳು ಪ್ರತಿ ಯೂನಿಟ್‌ಗೆ 1 ರೂಪಾಯಿ 20 ಪೈಸೆ ಹೆಚ್ಚಳಕ್ಕೆ ಕೋರಿವೆ.
ಪ್ರಸ್ತಾವನೆಯಲ್ಲಿ ಪ್ರತಿ ಯೂನಿಟ್‌ಗೆ ಮೊದಲ ವರ್ಷ ಅಂದರೆ 2025- 26ಕ್ಕೆ 67 ಪೈಸೆ, 2ನೇ ವರ್ಷ ಅಂದರೆ 2026-27ಕ್ಕೆ ಯೂನಿಟ್‌ಗೆ 74 ಪೈಸೆ ಹಾಗೂ ಮೂರನೇ ವರ್ಷ ಅಂದರೆ 2027-28ಕ್ಕೆ 91 ಪೈಸೆ ವಿಸ್ತರಣೆ ಮಾಡಲು ಮನವಿ ಮಾಡಲಾಗಿದೆ. ಒಂದು ವೇಳೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಒಪ್ಪಿಗೆ ಸೂಚಿಸಿದರೆ ಪ್ರಸ್ತಾವನೆಯಂತೆ ವಿದ್ಯುತ್ ದರ ಹೆಚ್ಚಾಗಲಿದೆ.
ವಿದ್ಯುತ್ ದರಗಳನ್ನು ವಾರ್ಷಿಕವಾಗಿ ಪರಿಶೀಲಿಸುವ ಮತ್ತು ಪರಿಷ್ಕರಿಸುವ ಕೆಇಆರ್‌ಸಿ ಪ್ರಸ್ತುತ ಎಸ್ಕಾಮ್‌ಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಪ್ರಕ್ರಿಯೆಯ ಭಾಗವಾಗಿ ಈಗಾಗಲೇ ಸಾರ್ವಜನಿಕ ಸಮಾಲೋಚನೆಗಳನ್ನು ನಡೆಸಲಾಗಿದ್ದು, ಆಯೋಗವು ತನ್ನ ನಿರ್ಧಾರವನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ.
ಅನುಮೋದನೆ ದೊರೆತರೆ 2025 ಏಪ್ರಿಲ್ 1 ರಿಂದ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ. ಇದರಿಂದ ರಾಜ್ಯಾದ್ಯಂತ ಗ್ರಾಹಕರಿಗೆ ವಿದ್ಯುತ್ ಬಿಲ್ ಹೆಚ್ಚಾಗಲಿದೆ. ಆದರೆ ಕೆಇಆರ್‌ಸಿ ಎಸ್ಕಾಂಗಳ ಪ್ರಸ್ತಾವನೆಗಳ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.