ಬೆಂಗಳೂರು: ಚಿತ್ರೀಕರಣದ ಸೆಟ್ ಹಾಕಲು ಮರ ಕಡಿದ ಆರೋಪ ಹೊತ್ತಿದ್ದ ಟಾಕ್ಸಿಕ್ ಚಿತ್ರತಂಡಕ್ಕೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಚಿತ್ರತಂಡದ ವಿರುದ್ಧ ಹಾಕಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನೆಮಾ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ ಹೆಚ್.ಎಂ.ಟಿ ಸುಪರ್ದಿಯಲ್ಲಿದ್ದ 18 ಎಕರೆ ಜಾಗದಲ್ಲಿ ಚಿತ್ರತಂಡ ಸೆಟ್ ಹಾಕಿತ್ತು. ಈ ವೇಳೆ ಚಿತ್ರತಂಡ ಸೆಟ್ ಹಾಕಲು ಮರಗಳನ್ನು ಕಡಿದುಹಾಕಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಕೀಲರೊಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಆದರೆ ಟಾಕ್ಸಿಕ್ ಚಿತ್ರತಂಡ ಪಡೆದಿದ್ದ ಜಾಗದಲ್ಲಿ ಯಾವುದೇ ಮರ ಕಡಿದಿಲ್ಲ ಹಾಗೂ ಆ ಜಾಗ ಅರಣ್ಯ ಇಲಾಖೆಗೆ ಸೇರಿದ್ದಲ್ಲ ಎನ್ನುವ ವಿಚಾರವಾಗಿ ಚಿತ್ರ ತಂಡದ ಪರ ವಕೀಲರು ವಾದ ಮಂಡಿಸಿದ್ದರು.
ಇದೀಗ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಚಿತ್ರದ ನಿರ್ಮಾಪಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದ್ದು ಈ ಮೂಲಕ ಚಿತ್ರತಂಡ ನಿರಾಳರಾಗಿದ್ದಾರೆ.