ರಾಣಿಬೆನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮೈಸೂರು, ತುಮಕೂರು, ಬೆಂಗಳೂರು ಇತರ ಕಡೆಗಳಲ್ಲಿ ಕಡಿಮೆ ಜನಸಂಖ್ಯೆ ಇರುವ ಪ್ರದೇಶದಲ್ಲಿ ಜಾತಿಗಣತಿ ಮಾಡಿ ಸರ್ಕಾರಕ್ಕೆ ಸುಳ್ಳು ವರದಿ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಜನರು ವಾಸ ಮಾಡುತ್ತಿದ್ದು, ಕೂಲಿಗಾಗಿ ವಲಸೆ ಹೋಗಿ ಜೀವನ ಮಾಡುವ ಸ್ಥಿತಿಯಿದೆ.
ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಎಚ್. ಆಂಜನೇಯ ಅವರು ಬಂಜಾರ ಸಮುದಾಯದ ಕುರಿತು ಸುಳ್ಳು ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ನೀಡಿದ್ದು ಇದೀಗ ಒಳ ಮೀಸಲಾತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಬಂಜಾರ ಸಮಾಜವನ್ನು ಎಸ್ಸಿ ಮೀಸಲಾತಿಯಿಂದ ಹೊರಗಿಡಬೇಕು ಎಂದು ಕೆಲವರು ಕುತಂತ್ರ ಮಾಡಿ ಇದೀಗ ಒಳ ಮೀಸಲಾತಿ ಜಾರಿಗೆ ತರಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಬಂಜಾರ ಸಮುದಾಯವು ತನ್ನದೆ ಆದ ಸಂಸ್ಕೃತಿ, ಆಚಾರ ವಿಚಾರ ಹೊಂದಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದ ಸಮುದಾಯವಾಗಿದೆ. ಇಂತಹ ಸಮುದಾಯಕ್ಕೆ ಇದೀಗ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದರು.
2011ರ ಜಾತಿ ಗಣತಿ ವರದಿಯ ಪ್ರಕಾರ ರಾಜ್ಯದಲ್ಲಿ ಕೇವಲ ಐದಾರು ಜಿಲ್ಲೆಯಲ್ಲಿ ಜಾತಿ ಗಣತಿ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಅಲ್ಲದೆ ಬಂಜಾರ ಸಮುದಾಯ ರಾಜ್ಯದಲ್ಲಿ ಆರ್ಥಿಕವಾಗಿ ಸದೃಢವಾಗಿದ್ದಾರೆ ಎಂದು ಹೇಳಲಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.