ಧಾರವಾಡ: ಇತ್ತೀಚಿನ ದಿನಗಳಲ್ಲಿ ಪೊಲೀಸರ ಹೆಸರಿನಲ್ಲಿ ವೀಡಿಯೋ ಕಾಲ್ ಮಾಡಿ ವಂಚನೆ ಆರೋಪದಲ್ಲಿ ನಿಮ್ಮನ್ನು ಅರೆಸ್ಟ್ ಮಾಡಲು ವಾರೆಂಟ್ ಇದೆ ಎಂದು ಬೆದರಿಸಿ ಹಣ ಸುಲಿಗೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಷ್ಟು ದಿನ ಕೇವಲ ಹೊರರಾಜ್ಯಗಳಲ್ಲಿ ಮಾತ್ರ ನಡೆಯುತ್ತಿದ್ದ ವೀಡಿಯೋ ಕಾಲ್ ವಾರೆಂಟ್ ವಂಚನೆ ಇದೀಗ ರಾಜ್ಯಕ್ಕೂ ಕಾಲಿಟ್ಟಿದ್ದು ಧಾರವಾಡದಲ್ಲಿ ಇಂತಹದ್ದೊಂದು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.
ಧಾರವಾಡದ ವ್ಯಕ್ತಿಯೋರ್ವರಿಗೆ ಪೊಲೀಸ್ ಅಧಿಕಾರಿಯ ಯುನಿಫಾರ್ಮ್ ಧರಿಸಿದ್ದ ವ್ಯಕ್ತಿ ವಾಟ್ಸಾಪ್ ಮೂಲಕ ವೀಡಿಯೋ ಕಾಲ್ ಮಾಡಿದ್ದು ಮುಂಬೈ ಪೊಲೀಸ್ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ನಿಮ್ಮ ಮೇಲೆ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿರುವ ಆರೋಪವಿದ್ದು, ನಿಮ್ಮನ್ನು ಬಂಧಿಸಲು ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದೆ ಎಂದು ದಾಖಲೆಗಳನ್ನು ವಾಟ್ಸಾಪ್ ಮಾಡಿದ್ದಾನೆ. ಈ ಮೂಲಕ ತಾನು ಅಸಲಿ ಪೊಲೀಸ್ ಎನ್ನುವಂತೆ ತೋರಿಸಿಕೊಂಡು ಅಮಾಯಕ ಜನರನ್ನು ಹೆದರಿಸಿ ಕೇಸ್ ವಾಪಸ್ ಪಡೆಯಲು ಹಣ ನೀಡುವಂತೆ ವಸೂಲಿ ಮಾಡಲಾಗುತ್ತದೆ.
ಇತ್ತೀಚೆಗೆ ಧಾರವಾಡದ ಗ್ರಾಮೀಣ ಭಾಗದಲ್ಲಿ ಹಲವರಿಗೆ ಈ ರೀತಿ ನಕಲಿ ಪೊಲೀಸರಿಂದ ಕರೆಗಳು ಬಂದಿದ್ದು, ಇಷ್ಟು ದಿನ ಓಟಿಪಿ ಪಡೆದು ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದವರು ಹೊಸ ಮಾರ್ಗವನ್ನು ಕಂಡುಕೊಂಡಂತಾಗಿದೆ. ಅದರಲ್ಲೂ ಪೊಲೀಸರಂತೆ ಯುನಿಫಾರ್ಮ್ ಧರಿಸಿ, ಪೊಲೀಸ್ ಠಾಣೆಯ ರೀತಿಯಲ್ಲೇ ಬಿಂಬಿಸುವಂತೆ ಸೆಟ್ ಅಪ್ ಮಾಡಿಕೊಂಡು ಕರೆ ಮಾಡುವುದರಿಂದ ಅಮಾಯಕ ಜನರು ನಿಜವಾದ ಪೊಲೀಸರೇ ಕರೆ ಮಾಡಿದ್ದಾರೆಂದು ಆತಂಕಗೊಂಡು ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ.
ಅಲ್ಲದೇ ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ ಒಂದರಲ್ಲಿ ಡ್ರಗ್ಸ್ ಪತ್ತೆಯಾಗಿದೆ, ಅಕ್ರಮ ಹಣ ವರ್ಗಾವಣೆಯಲ್ಲಿ ನಿಮ್ಮ ಖಾತೆ ಸಿಕ್ಕಿದೆ. ನೀವು ಕೇಳಿದಷ್ಟು ಹಣ ಕೊಡದಿದ್ದಲ್ಲಿ ಸ್ಥಳಕ್ಕೇ ಬಂದು ಅರೆಸ್ಟ್ ಮಾಡುತ್ತೇವೆ ಎಂತೆಲ್ಲಾ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲಾಗುತ್ತದೆ. ಹೀಗಾಗಿ ಈ ರೀತಿ ಸೈಬರ್ ವಂಚನೆಗಳಿಂದ ಜನಸಾಮಾನ್ಯರು ಎಚ್ಚರಿಕೆ ಇರಬೇಕು. ಇಂತಹ ಘಟನೆಗಳು ನಡೆದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುವಂತೆ ಎಸ್ಪಿ ಗೋಪಾಲ ಬ್ಯಾಕೋಡ್ ಮನವಿ ಮಾಡಿದ್ದಾರೆ.