ಅಬುದಾಬಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 17 ರನ್ ಗಳ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಡೆಲ್ಲಿ ತಂಡವು ಫೈನಲ್ ಗೆ ಲಗ್ಗೆಯಿಟ್ಟಿದ್ದು ಫೈನಲ್ ನಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ್ದ 190 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿ 17 ರನ್ ಗಳಿಂದ ಸೋಲಿಗೆ ಶರಣಾಯಿತು. ಈ ಸೋಲಿನಿಂದ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾದಂತಾಯಿತು. ಸನ್ ರೈಸರ್ಸ್ ಪರ ಪ್ರಿಯಂ ಗರ್ಗ್-17, ಮನೀಶ್ ಪಾಂಡೆ – 21, ಕೇನ್ ವಿಲಿಯಮ್ಸನ್ -67* ಹಾಗು ಅಬ್ದುಲ್ ಸಾಮದ್ – 33* ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕಗಿಸೊ ರಬಾಡ 4, ಮಾರ್ಕಸ್ ಸ್ಟೋನಿಸ್ 3 ವಿಕೆಟ್ ಹಾಗು ಅಕ್ಸಾರ್ ಪಟೇಲ್ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 189 ರನ್ ಗಳನ್ನು ಗಳಿಸಿತು. ಡೆಲ್ಲಿ ಪರ ಸ್ಟೋನಿಸ್-38, ಶಿಖರ್ ದವನ್-78, ಶ್ರೇಯಸ್ ಅಯ್ಯರ್-21 ಹಾಗು ಶಿಮ್ರನ್ ಹೆತ್ಮೆಯರ್-42* ರನ್ ಗಳಿಸಿದರು. ಸನ್ ರೈಸರ್ಸ್ ಪರ ಜೇಸನ್ ಹೋಲ್ಡರ್, ರಶೀದ್ ಖಾನ್ ಹಾಗು ಸಂದೀಪ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಆಲ್ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಮಾರ್ಕಸ್ ಸ್ಟೋನಿಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.