ಬೆಂಗಳೂರು: ಪಠ್ಯಪುಸ್ತಕದಲ್ಲಿ ದಾಸ ಶ್ರೇಷ್ಠ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಲಿಖಿತ ಸೂಚನೆ ನೀಡಿದ್ದಾರೆ.
ಹೌದು, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ‘ಪರಿಷ್ಕೃತ ಪಠ್ಯದಲ್ಲಿ ಕನಕದಾಸರ ಕುರಿತಾದ ಜೀವನಚರಿತ್ರೆ & ವಿವರಗಳನ್ನು ಕಡೆಗಣಿಸಿ ವಿಷಯಗಳನ್ನು ಕಡಿತ ಮಾಡಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿ ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದರು.
‘ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕನಕದಾಸರ ಕುರಿತು ಈ ಹಿಂದೆ ಒಂದು ಪುಟದ ವಿವರಣೆ ಇತ್ತು. ಪರಿಷ್ಕರಣೆ ಆದ ಬಳಿಕ ಕನಕದಾಸರ ಬಗ್ಗೆ ಮಾಹಿತಿ ಕಡಿಮೆಯಾಗಿದೆ. ಪಠ್ಯದಲ್ಲಿ ಮೊದಲಿನಂತೆಯೇ ವಿವರಣೆ ಇರಬೇಕು’ ಎಂದು ಸಿಎಂಗೆ ಶ್ರೀಗಳು ಮನವಿ ಪತ್ರ ಸಲ್ಲಿಸಿದ್ದರು.
ಶ್ರೀಗಳ ಮನವಿಯ ಮೇರೆಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಕನಕದಾಸರ ಜೀವನ ಚರಿತ್ರೆಯನ್ನು ಈ ಹಿಂದೆ ಇದ್ದಂತೆಯೇ ಮತ್ತೆ ಪ್ರಕಟಿಸಬೇಕು ಎಂದು ಲಿಖಿತ ಸೂಚನೆ ನೀಡಿದ್ದಾರೆ.