ಚಿಕ್ಕೋಡಿ: ವಿವಿಧ ವಾಹನಗಳ ಮಧ್ಯೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡ ಘಟನೆ ನಿಪ್ಪಾಣಿ ನಗರ ಹೊರವಲಯದ ಸ್ಥವನಿಧಿ ಘಟ್ಟದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಖಾನಾಪುರ ತಾಲ್ಲೂಕಿನ ಜಾಂಬೋಟಿಯ ನಾರಾಯಣ ನಾಗು ಪಾರವಾಳಕರ(65) ಮೃತ ದುರ್ದೈವಿಯಾಗಿದ್ದಾನೆ.
ಜಾಂಬೋಟಿ ಗ್ರಾಮದ ಸುಮಾರು 15ಕ್ಕೂ ಅಧಿಕ ಮಂದಿ ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ ಮತ್ತು ಜ್ಯೋತಿಬಾ ದೇವಸ್ಥಾನಕ್ಕೆ ಕ್ರೂಜರ್ ವಾಹನದಲ್ಲಿ ಹೊರಟಿದ್ದರು. ಈ ವೇಳೆ ತಮಿಳುನಾಡಿನಿಂದ ನಿಪ್ಪಾಣಿ ಮಾರ್ಗವಾಗಿ ಮುಂಬೈಗೆ ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಜರ್‌ಗೆ ಗುದ್ದಿದೆ. ಪರಿಣಾಮ ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನಕ್ಕೆ ಕ್ರೂಜರ್ ಅಪ್ಪಳಿಸಿದೆ. ಇದರಿಂದಾಗಿ ಕ್ರೂಜರ್‌ನಲ್ಲಿದ್ದ ನಾರಾಯಣ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ಕ್ರೂಜರ್‌ನಲ್ಲಿ ಪ್ರಯಾಣಿಸುತ್ತಿದ್ದ ಜಾಂಬೋಟಿ ಗ್ರಾಮದ ರೇಷ್ಮಾ ಕುಡತರಕರ(45) ಹಾಗೂ ಶಂಕರ ಪಾರವಾಳಕರ(28) ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಉಳಿದಂತೆ ಸುಮಾರು 15 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.