ನರೇಗಲ್ಲ (ಗದಗ): ಪಟ್ಟಣದಲ್ಲಿರುವ ಹಾಲಕೆರೆ ಅನ್ನದಾನೇಶ್ವರ ಮಠದ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಕೆವಿ ಮತ್ತು ಬಿಎಂ ಉಚಿತ ಪ್ರಸಾದ ನಿಲಯದ ೧೫.೦೬ ಎಕರೆ ಜಮೀನಿನಲ್ಲಿ ೧೧.೧೯ ಎಕರೆ ಜಮೀನು 2019-2020ರಲ್ಲಿಯೇ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದ್ದು, ಶ್ರೀಮಠದ ಭಕ್ತರನ್ನು ರೊಚ್ಚಿಗೆದ್ದು ಎಚ್ಚರಿಕೆ ನೀಡಿದ್ದಾರೆ.
ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠದ ಅಂದಿನ ಪೀಠಾಧಿಪತಿಗಳಾಗಿದ್ದ ಗುರು ಅನ್ನದಾನ ಮಹಾಸ್ವಾಮಿಗಳು ಸ್ವಾತಂತ್ರ ಪೂರ್ವದಲ್ಲಿಯೇ ಈ ಭಾಗದ ಜನತೆಗೆ ಶಿಕ್ಷಣ ಒದಗಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಅಲ್ಲಿನ ಮಕ್ಕಳಿಗೆ ವಸತಿಯೊಂದಿಗೆ ಅನ್ನದಾಸೋಹವನ್ನು ಒದಗಿಸಬೇಕು ಎಂದು ಜೋಳಿಗೆ ಹಿಡಿದು ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದರು. ಅದನ್ನು ಮನಗಂಡ ಭಕ್ತರು ಶ್ರಿಮಠದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶಿಕ್ಷಿತರಾಗಲೆಂಬ ಉದ್ದೇಶದಿಂದ ಹಲವಾರು ದಾನಿಗಳು ಶ್ರೀಮಠಕ್ಕೆ ತಮ್ಮ ಆಸ್ತಿಯನ್ನು ದಾನದ ರೂಪದಲ್ಲಿ ನೀಡಿದ್ದರು. ಅದರ ಸಹಕಾರದೊಂದಿಗೆ ಪ್ರತಿವರ್ಷ ನೂರಾರು ಮಕ್ಕಳ ಬದುಕಿಗೆ ದಾರಿದೀಪವಾಗಿದ್ದ ಪ್ರಸಾದ ನಿಲಯವೀಗ ವಕ್ಫ್ ಬೋರ್ಡ್ ಪಾಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಎಸ್ಎವಿವಿಪಿ ಸಮಿತಿಯ ಕೆವಿ ಮತ್ತು ಬಿಎಂ ಉಚಿತ ಪ್ರಸಾದ ನಿಲಯದ ಸರ್ವೇ ನಂ. ೪೧೦/೨ಬಿ ಒಟ್ಟು ೧೫.೦೬ ಎಕರೆ ಜಮೀನು ಹೊಂದಿದ್ದು, ಇದರಲ್ಲಿ ೧೧.೧೯ ಎಕರೆ ಜಮೀನು ರೆಹಮಾನ ಶಾವಲಿ ದರ್ಗಾ ವಕ್ಫ್ ಎಂದು ನಮೂದಾಗಿದ್ದು, ಉಳಿದ ೩.೨೭ ಎಕರೆ ಜಮೀನು ಚೇರ್ಮನ್ ಕೆವಿ ಮತ್ತು ಬಿಎಂ ಉಚಿತ ಪ್ರಸಾದ ನಿಲಯದ ಹೆಸರಿನಲ್ಲಿದೆ.
ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ. ಅಭಿನವ ಅನ್ನದಾನ ಮಹಾಸ್ವಾಮಿಗಳ ಅವಧಿಯಲ್ಲಿ ೨೦೧೯-೨೦ರಲ್ಲಿ ಸರ್ವೆ ನಂ. ೪೧೦/೨ಬಿ ಇದರ ಪಹಣಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನಮೂದಾಗಿದ್ದನ್ನು ಅರಿತ ಶ್ರೀಗಳು ಅಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಆ ವೇಳೆ ಕೊರೋನಾ ಹಿನ್ನೆಲೆ ಹೋರಾಟ ನನೆಗುದಿಗೆ ಬಿದ್ದಿತ್ತು. ಮುಂದೆ ಅವರ ಆರೋಗ್ಯ ಏರುಪೇರಾದ ಹಿನ್ನೆಲೆ ಹಾಗೆ ಹಿಂದಕ್ಕೆ ಸರಿದಿತ್ತು. ಮುಂದೆ ಅವರು ದೈವಾದೀನರಾದರು. ನೂತನ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.
ಹೋರಾಟದ ಎಚ್ಚರಿಕೆ:
ಶ್ರೀಮಠದ ಪ್ರಸಾದ ನಿಲಯದ ಆಸ್ತಿಗೆ ವಕ್ಫ್ ಹೆಸರು ದಾಖಲಾದ ಹಿನ್ನೆಲೆ ಹಾಲಕೆರೆ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ಶ್ರೀಗಳು ಬಡಮಕ್ಕಳಿಗೆ ಸಂಸ್ಕಾರ ಶಿಕ್ಷಣದ ಜತೆಗೆ ಪ್ರಸಾದವನ್ನು ಒದಗಿಸಬೇಕು ಎಂಬ ಮಹತ್ತರ ಯೋಜನೆಗೆ ಭಕ್ತರು ಹಾಗೂ ರೈತರು ಮುಂದಾಗಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನತೆಗೆ ಉಪಯೋವಾಗಲಿ ಎಂದು ಭೂದಾನ ಮಾಡಿದ್ದು, ವಕ್ಫ್ ಹೆಸರು ನಮೂದಿಸಿರುವುದು ಸರಿಯಲ್ಲ. ನಾವು ನಮ್ಮ ಮಠದ ಆಸ್ತಿಯನ್ನು ಬಿಟ್ಟು ಕೊಡುವುದಿಲ್ಲ. ಇದಕ್ಕೆ ಎಂತಹ ಹೋರಾಟಕ್ಕೂ ನಾವು ಸಿದ್ಧ. ಬೇಕಾದರೆ ಪ್ರಾಣ ಬಿಟ್ಟೇವು ಆದರೆ ಶ್ರೀಮಠದ ಆಸ್ತಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ನೆರೆದಿದ್ದ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಬೋರ್ಡಿಗೆ ಧಿಕ್ಕಾರ ಕೂಗಿದ್ದಾರೆ.