ಭಟ್ಕಳ: ಹಿಂಸಾತ್ಮಕವಾಗಿ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-66 ರಸ್ತೆ ತೆಂಗಿನಗುಂಡಿ ಕ್ರಾಸ್ ಸಮೀಪ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ವಾಹನ ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೈಸೂರಿನ ಬಾಳೂರು ಹೊಸಕೊಪ್ಪಲು ಮೂಲದ ರಾಘವೇಂದ್ರ ನಾಗೇಂದ್ರ(30) ಹಾಗೂ ಪಿರಿಯಾಪಟ್ಟಣದ ಹಲಗನಹಳ್ಳಿ ನಿವಾಸಿ ಅಯೂಬ್ ಅಹ್ಮದ್ ರಶೀದ್ ಅಹ್ಮದ್(40) ಹಾಗೂ ಇತರರು ಎಂದು ಗುರುತಿಸಲಾಗಿದೆ.
ಇವರು ವಧೆ ಮಾಡುವ ಉದ್ದೇಶದಿಂದ 5.50 ಲಕ್ಷ ಮೌಲ್ಯದ 11 ಕೋಣಗಳು ಹಾಗೂ 2.50 ಲಕ್ಷ ಮೌಲ್ಯದ 5 ಎಮ್ಮೆಗಳನ್ನು ಯಾವುದೇ ಪಾಸ್ ಪರವಾನಿಗೆ ಇಲ್ಲದೇ ಅಶೋಕ ಲೇಲ್ಯಾಂಡ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಹಗ್ಗಗಳಿಂದ ಕಟ್ಟಿ ತುಂಬಿಕೊಂಡು ಸಾಗಾಟ ಮಾಡುತ್ತಿರುವಾಗ ರಾಷ್ಟ್ರೀಯ ಹೆದ್ದಾರಿ-66ರ ತೆಂಗಿನಗುಂಡಿ ಕ್ರಾಸ್‌ನಲ್ಲಿ ಮುಂಜಾನೆ 3 ಗಂಟೆಗೆ ದಾಳಿ ಮಾಡಿ 11 ಕೋಣಗಳು ಮತ್ತು 5 ಎಮ್ಮೆಗಳನ್ನು ಹಾಗೂ ಅಶೋಕ ಲೇಲ್ಯಾಂಡ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ದಾಳಿಯನ್ನು ಸಿ.ಪಿ.ಐ. ಗೋಪಿಕೃಷ್ಣ. ಕೆ.ಆರ್ ನೇತೃತ್ವದಲ್ಲಿ, ಪಿ.ಎಸ್.ಐ ಸೋಮರಾಜ ರಾಠೋಡ, ಸಿಬ್ಬಂದಿಗಳಾದ ಉದಯ ನಾಯ್ಕ, ಮಹಾಂತೇಶ ಪಮಾರ, ಶಿವಶರಣಪ್ಪ ಶಿನ್ನೂರ, ರಾಜು ಗೊಟಗೋಡಿ, ಪರಮಾನಂದ ಉಜ್ಜಿನಕೊಪ್ಪ, ಅಪರಾದ ವಿಭಾಗದ ಸಿಬ್ಬಂದಿ ಮಹಾಂತೇಶ ಹಿರೇಮಠ ಮತ್ತು ಕೃಷ್ಣಾ ಎನ್.ಜಿ ಇದ್ದರು. ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.