ಬೆಂಗಳೂರು: ತಮಿಳುನಾಡಿನ ಪೆನ್ನಾಗರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ತಿಂಗಳ ಆರಂಭದಲ್ಲಿ ಗುಂಡೇಟಿಗೆ ಬಲಿಯಾದ ರೌಡಿಶೀಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಭಾರತಿನಗರ ನಿವಾಸಿ ಬ್ರಿಜೇಶ್ (35) ಎಂದು ಗುರುತಿಸಲಾಗಿದ್ದು, ಆತ ಜಿಮ್ ನಡೆಸುತ್ತಿದ್ದನು. ಸುಮಾರು ಮೂರು ವರ್ಷಗಳ ಹಿಂದೆ ಆತನನ್ನು ರೌಡಿ ಎಂದು ಪಟ್ಟಿ ಮಾಡಲಾಗಿತ್ತು. ಹತ್ಯೆಗೊಳಗಾದ ಗುಣಶೇಖರ(30) ಬಾಗಲೂರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ.
ಬ್ರಿಜೇಶ್ ಪಂಜಾಬಿನಿಂದ ನಕಲಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ಗುಣಶೇಖರ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫೈನಾನ್ಸ್ ಕಂಪನಿಯೊಂದರಲ್ಲಿ ಗುಣಶೇಖರ ಸಂಬಂಧಿಕರ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು ಹಣವನ್ನು ಪಡೆದುಕೊಂಡಿದ್ದನು. ಚಿನ್ನ ನಕಲಿ ಎಂದು ಫೈನಾನ್ಸ್ ಕಂಪನಿ ತಿಳಿದಾಗ, ಅವರು ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದು, ಪೊಲೀಸ್ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದರು. ಗುಣಶೇಖರನು ಹಣವನ್ನು ಹಿಂದಿರುಗಿಸುವಂತೆ ಬ್ರಿಜೇಶ್ನ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದನು. ಅಲ್ಲದೇ ಬ್ರಿಜೇಶ್ನ ನಕಲಿ ಚಿನ್ನದ ವ್ಯವಹಾರಗಳನ್ನು ಇತರರಿಗೆ ಬಹಿರಂಗಪಡಿಸಲು ಪ್ರಾರಂಭಿಸಿದ್ದು, ಇದು ಬ್ರಿಜೇಶ್ನನ್ನು ಕೆರಳಿಸಿತು.
ಜನವರಿ 10ರಂದು, ಬ್ರಿಜೇಶ್ ಗುಣಶೇಖರನಿಗೆ ಹಣ ನೀಡುವ ನೆಪದಲ್ಲಿ ಬಾಗಲೂರಿನ ಅಪಾರ್ಟ್ಮೆಂಟ್ಗೆ ಕರೆದೊಯ್ದು ಎರಡು ಬಾರಿ ಗುಂಡು ಹಾರಿಸಿದನು. ನಂತರ, ಆತ ತನ್ನ ಸಹಚರನನ್ನು ಕರೆದು, ಕಾರಿನಲ್ಲಿ ಶವವನ್ನು ತಮಿಳುನಾಡಿನ ದೂರದ ಪ್ರದೇಶಕ್ಕೆ ಸಾಗಿಸಿ ಬೆಂಕಿ ಹಚ್ಚಿದನು, ದೇಹವು ಅರ್ಧ ಸುಟ್ಟುಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗುಣಶೇಖರ ಅವರ ಪತ್ನಿ ಜನವರಿ 12ರಂದು ಬಾಗಲೂರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಅಪಾರ್ಟ್ಮೆಂಟ್ ಬಳಿ ಗುಣಶೇಖರನ ಕೊನೆಯ ಮೊಬೈಲ್ ಚಟುವಟಿಕೆಯನ್ನು ಪೊಲೀಸರು ಪತ್ತೆಹಚ್ಚಿದ್ದರು. ಅವರು ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಬ್ರಿಜೇಶ್ ಮತ್ತು ಆತನ ಸ್ನೇಹಿತ ಬೆಡ್‌ಶೀಟ್ನಲ್ಲಿ ಶವವನ್ನು ಹೊತ್ತುಕೊಂಡಿರುವುದು ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
“ಸುಳಿವುಗಳ ಆಧಾರದ ಮೇಲೆ, ಬ್ರಿಜೇಶ್ನನ್ನು ಪಂಜಾಬ್ನ ಅಮೃತಸರದ ಬಳಿ ಬಂಧಿಸಲಾಯಿತು. ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ “ಎಂದು ಪೊಲೀಸರು ತಿಳಿಸಿದ್ದಾರೆ.