ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಸಂಬಂಧಿಸಿದಂತೆ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಸಿಸಿಬಿ ಪೊಲೀಸರು ಸಕತ್ ಡ್ರಿಲ್ ನಡೆಸಿದ್ದಾರೆ. ಬಳ್ಳಾರಿ ಜೈಲಿಗೆ ಇಂದು ಭೇಟಿ ನೀಡಿದ್ದ ಸಿಸಿಬಿ ಅಧಿಕಾರಿಗಳು ಸತತ 3 ಗಂಟೆಗಳ ಕಾಲ ದರ್ಶನ್‌ರ ವಿಚಾರಣೆ ನಡೆಸಿದ್ದಾರೆ.
ಸಿಸಿಬಿ ಜಂಟಿ ಆಯುಕ್ತ ಡಾ.ಚಂದ್ರಗುಪ್ತ ನೇತೃತ್ವದಲ್ಲಿ ಸೋಮವಾರ ನಟ ದರ್ಶನ್ ವಿಚಾರಣೆ ನಡೆದಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಳಕೆ ಮಾಡಿದ್ದ ಮೊಬೈಲ್ ಯಾರದ್ದು?, ಯಾವ ಕಾರಣಕ್ಕೆ ಮೊಬೈಲ್ ಬಳಕೆ ಮಾಡಿದ್ದೀರಿ? ಸಿಗರೇಟ್ ಎಲ್ಲಿಂದ ಬಂತು? ತಂದು ಕೊಟ್ಟವರು ಯಾರು? ಜೈಲಿನ ನಿಯಮಗಳು ನಿಮಗೆ ಗೊತ್ತಿರಲಿಲ್ಲವೇ? ಎನ್ನುವ ಕುರಿತು ಸಿಸಿಬಿ ಅಧಿಕಾರಿ ಚಂದ್ರಗುಪ್ತ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಸಿಸಿಬಿ ಪೊಲೀಸರ ಪ್ರಶ್ನೆಗಳ ಸುರಿಮಳೆಯಿಂದ ದರ್ಶನ್ ತಬ್ಬಿಬ್ಬಾದರು ಎನ್ನಲಾಗಿದೆ. ಸುಮಾರು 3 ಗಂಟೆಗಳ ಕಾಲ ಸಿಸಿಬಿ ಪೊಲೀಸರು ದರ್ಶನ್‌ಗೆ ಡ್ರಿಲ್ ಮಾಡಿದ್ದು, ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಬಳಿಕ ಸಂಜೆಯ ವೇಳೆಗೆ ಸಿಸಿಬಿ ಪೊಲೀಸರು ವಿಚಾರಣೆ ಮುಕ್ತಾಯಗೊಳಿಸಿ ಜೈಲಿನಿಂದ ತೆರಳಿದ್ದಾರೆ.