ನವದೆಹಲಿ: ರೋಜ್‌ಗಾರ ಮೇಳದ ಅಂಗವಾಗಿ ಮಂಗಳವಾರ(ಅ.29) ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಾಗಿ ನೇಮಕಗೊಂಡ 51,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ನಡೆಯಲಿರುವ ವೀಡಿಯೋ ಕಾನ್ಫರೆನ್ಸಿಂಗ್ ಕಾರ್ಯಕ್ರಮದ ಮೂಲಕ ನೇಮಕಾತಿ ಪತ್ರ ವಿತರಿಸಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಯುವಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ರೋಜ್‌ಗಾರ್ ಮೇಳ ಎತ್ತಿ ತೋರಿಸುತ್ತದೆ. ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವುದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಯುವಕರನ್ನು ಸಬಲೀಕರಣಗೊಳಿಸುತ್ತದೆ ಎನ್ನುವುದು ಪ್ರಧಾನಿಯವರ ಅಭಿಪ್ರಾಯವಾಗಿದೆ.
ರೋಜ್‌ಗಾರ್ ಮೇಳವನ್ನು ರಾಷ್ಟ್ರಾದ್ಯಂತ 40 ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ. ಕಂದಾಯ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಂತಹ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಹೊಸ ನೇಮಕಾತಿಗಳನ್ನು ಸೇರಿಸಲಾಗುತ್ತದೆ.
ಹೊಸದಾಗಿ ನೇಮಕಗೊಂಡವರು iGOT ಕರ್ಮಯೋಗಿ ಪೋರ್ಟಲ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಮಾಡ್ಯೂಲ್ ‘ಕರ್ಮಯೋಗಿ ಪ್ರಾರಂಭ್’ ಮೂಲಕ ಪ್ರಾರಂಭಿಕ ತರಬೇತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಈ ಪೋರ್ಟಲ್‌ನಲ್ಲಿ 1400ಕ್ಕೂ ಹೆಚ್ಚು ಇ-ಲರ್ನಿಂಗ್ ಕೋರ್ಸ್‌ಗಳು ಲಭ್ಯವಿದ್ದು, ಇದು ನೇಮಕಾತಿ ಹೊಂದಿದವರು ತಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತದೆ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಕೆಲಸ ಮಾಡುತ್ತದೆ ಎಂದಿದ್ದಾರೆ.