ಕಾರವಾರ: ಬೇಲೆಕೇರಿ ಅದಿರು ಕಳವು ಪ್ರಕರಣದಲ್ಲಿ ಜೈಲುಪಾಲಾಗಿದ್ದ ಶಾಸಕ ಸತೀಶ್ ಸೈಲ್‌ಗೆ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದ ಹಿನ್ನಲೆ ಕಾರವಾರದಲ್ಲಿ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ನಗರದ ಸುಭಾಷ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸತೀಶ್ ಸೈಲ್ ಬೆಂಬಲಿಗರು ಶಾಸಕರ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಸೇರಿ 7 ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಶಾಸಕ ಸೈಲ್ ಸೇರಿ ಇತರೆ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇಂದು ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ಶಾಸಕ ಸತೀಶ್ ಸೈಲ್ ಸೇರಿ 7 ಮಂದಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿದ್ದು, ದಂಡದ ಶೇಕಡಾ 25% ರಷ್ಟನ್ನು ವಿಚಾರಣಾಧೀನ ನ್ಯಾಯಾಲಯದಲ್ಲಿ ಮುಂದಿನ ಆರು ವಾರಗಳಲ್ಲಿ ಠೇವಣಿ ಇಡುವಂತೆ ಸೂಚಿಸಿ ಆದೇಶಿಸಿದೆ.
ಇದು ಸತೀಶ್ ಸೈಲ್ ಸೇರಿ 7 ಮಂದಿ ಆರೋಪಿಗಳಿಗೆ ಬಿಗ್ ರಿಲೀಫ್ ನೀಡಿದ್ದು, ಇದರ ಆಧಾರದ ಮೇಲೆ ಜಾಮೀನು ಪಡೆಯಲು ಅನುಕೂಲವಾಗಿದೆ. ಶಾಸಕ ಸೈಲ್‌ಗೆ ಹೈಕೋರ್ಟ್‌ನಲ್ಲಿ ಮೊದಲ ಹಂತದ ಗೆಲುವು ಸಿಕ್ಕಂತಾಗಿದ್ದು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಕಾರವಾರದಲ್ಲಿ ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಹೈಕೋರ್ಟ್ ತೀರ್ಪನ್ನು ಅಭಿನಂದಿಸಿದ್ದಾರೆ.