ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಲಿಂಗರಾಜಪುರ ಗ್ರಾಮದಲ್ಲಿ ಉಪ್ಪಾರ ಸಮಾಜದ ಎರಡು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾದ ಪ್ರಕರಣ ಸಂಬಂಧಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಪ್ಪಾರ ಸಮಾಜದ ಗೋವಿಂದಶೆಟ್ಟಿ ಎಂಬುವವರು ಗ್ರಾಮದಲ್ಲಿ ಮನೆ ಕಟ್ಟಿರುವುದಕ್ಕೆ ಹಾಗೂ ಸಿದ್ದರಾಜು ಎಂಬುವವರ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿರುವುದಕ್ಕೆ ಬಹಿಷ್ಕಾರ ಹಾಕಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ, ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಕುಟುಂಬದವರು ಮತ್ತು ಸಾಮಾಜಿಕ ಬಹಿಷ್ಕಾರ ಹಾಕಿದ ಯಜಮಾನರುಗಳ ಜೊತೆ ಬಹಿರಂಗವಾಗಿ ಸಭೆ ನಡೆಸಿ, ಇಬ್ಬರ ಅಹವಾಲುಗಳನ್ನು ಸುಮಾರು 2 ಗಂಟೆಗಳ ಕಾಲ ಆಲಿಸಲಾಯಿತು. ಬಹಿಷ್ಕಾರ ಪದ್ಧತಿ ಕಾನೂನು ಬಾಹಿರ ಎಂದು ಗ್ರಾಮದವರಿಗೆ ತಿಳುವಳಿಕೆ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೌಹಾರ್ದತೆಯಿಂದ ಬದುಕನ್ನು ನಡೆಸಿಕೊಂಡು ಹೋಗುವಂತೆ ತಿಳಿ ಹೇಳಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು.
ಅಲ್ಲದೇ, ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ @osd_cmkarnataka ‘ಎಕ್ಸ್ʼ ಖಾತೆಗೆ ಟ್ಯಾಗ್ ಮಾಡುವಂತೆ ತಿಳಿಸಲಾಗಿದೆ.