ಬೆಂಗಳೂರು: ಸ್ಟಾರ್ ನಟರ ಸಿನೆಮಾಗಳು ಬಿಡುಗಡೆಯಾಗುವ ವೇಳೆ ಅಭಿಮಾನಿಗಳು ಚಿತ್ರ ವೀಕ್ಷಣೆಗೆ ಕಾದು ಕುಳಿತಿರುತ್ತಾರೆ. ಅಲ್ಲದೇ, ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲ ಚಿತ್ರಮಂದಿರಗಳು ಹೆಚ್ಚನ ಲಾಭ ಗಳಿಕೆಗಾಗಿ ತಡರಾತ್ರಿ 1 ಗಂಟೆ, ಇಲ್ಲವೇ ಬೆಳಗಿನ ಜಾವ 4 ಗಂಟೆಗೆ ಸಿನೆಮಾ ಪ್ರದರ್ಶನ ಆಯೋಜಿಸುತ್ತಾರೆ.
ಆದರೆ ಇದು ಕಾನೂನು ಬಾಹಿರವಾಗಿದ್ದು, ಇಂತಹ ಪ್ರದರ್ಶನ ಆಯೋಜಿಸುವ ಬೆಂಗಳೂರಿನ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಫ್ಯಾನ್ಸ್ ಶೋ, ಸ್ಪೆಷಲ್ ಶೋ ಹೆಸರಲ್ಲಿ ಹೆಚ್ಚಿನ ಪ್ರದರ್ಶನ ಆಯೋಜಿಸಿ ಲಾಭ ಹೊಡೆಯಲು ಸಿದ್ಧತೆ ಮಾಡಿಕೊಂಡವರಿಗೆ ಶಾಕ್ ನೀಡಲು ಮುಂದಾಗಿದ್ದಾರೆ.
ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಆ‌್ಯಕ್ಟ್ 41ರ ಪ್ರಕಾರ, ಬೆಳಗ್ಗೆ 6.30ಕ್ಕೂ ಮೊದಲು ಯಾವುದೇ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡುವಂತಿಲ್ಲ. ಅಲ್ಲದೇ, ರಾತ್ರಿ 10.30ರ ನಂತರ ಯಾವುದೇ ಸಿನಿಮಾ ಪ್ರದರ್ಶನ ಆರಂಭವಾಗುವಂತಿಲ್ಲ. ಹೀಗಿದ್ದರೂ ಸಹ ಈ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಕೊಳ್ಳಲಾಗುತ್ತಿದೆ.
ಬುಕ್ ಮೈ ಶೋ ಮೂಲಕ ಬೆಳಗಿನಜಾವ 6.30ಕ್ಕೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಟಿಕೆಟ್ ಮಾರಾಟ ಆಗುತ್ತಿರುವುದನ್ನು ಜಿಲ್ಲಾಧಿಕಾರಿ ಗಮನಿಸಿದ್ದಾರೆ. ಈ ಹಿನ್ನಲೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸಮಯ ಪಾಲನೆ ಮಾಡದೇ ಅನಧಿಕೃತವಾಗಿ ಚಲನಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.