ಬಾಗಲಕೋಟೆ: ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕಬ್ಬಿನ ತೂಕದಲ್ಲಾಗುತ್ತಿರೋ ಮೋಸಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಇನ್ಮುಂದೆ ಸಕ್ಕರೆ ಕಾರ್ಖಾನೆಗಳಲ್ಲಿ ಹೊಸ ತೂಕದ ಮಷಿನ್ ಅಳವಡಿಸಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು, ಲಕ್ಷ್ಮಣ ಸವದಿ ಮತ್ತು ಕಾಗೆ ಅವರು ಸೇರಿ ರೈತರ ಕಬ್ಬು ಬೆಳೆಯ ತೂಕದ ಸಮಸ್ಯೆ ಬಗ್ಗೆ ಹೇಳಿದ್ದೆವು. ಇದರ ಬೆನ್ನಲ್ಲೇ ಸರ್ಕಾರ ಎಪಿಎಂಸಿ ಮುಖಾಂತರ ಮೊದಲು 15 ತೂಕದ ಮಷಿನ್ ಅಳವಡಿಸಲು ಮುಂದಾಗಿದೆ. ಸಚಿವ ಶಿವಾನಂದ ಎಪಿಎಂಸಿ ಮುಖಾಂತರ ಕ್ಯಾಬಿನೆಟ್ ನಲ್ಲಿ ಹೊಸ ತೂಕದ ಮಷಿನ್ ಗಳಿಗೆ ಮಂಜೂರಾತಿ ಪಡೆದಿದ್ದಾರೆ. ಶೀಘ್ರದಲ್ಲೇ ತೂಕದ ಮಷಿನ್ ಗಳನ್ನ ಅಳವಡಿಸಲಾಗುವುದು ಎಂದರು.
ಅದರಲ್ಲೂ ಮೊದಲು ಬಾಗಲಕೋಟೆ ಜಿಲ್ಲೆಯಲ್ಲಿ ಅಳವಡಿಸಿ ನಂತರ ಬೇರೆ ಜಿಲ್ಲೆಗೆ ಕಳಿಸಿ ಎಂದು ಮನವಿ ಮಾಡಿದ್ದೇವೆ. ಪ್ರತಿವರ್ಷ ಕಬ್ಬಿನ ಬಾಕಿ ಬಿಲ್ ಸೇರಿದಂತೆ ತೂಕದಲ್ಲಾಗುತ್ತಿರುವ ಮೋಸದ ಬಗ್ಗೆ ರೈತರು ಅಳಲು ತೋಡಿಕೊಳ್ಳುತ್ತಿದ್ದರು. ಕೆಲವು ಸಕ್ಕರೆ ಕಾರ್ಖಾನೆಗಳಿಂದ ಮೋಸವಾಗುತ್ತಿದೆ ಎಂದು ಆರೋಪಿಸುತ್ತಿದ್ದರು. ಆದರೆ ಇದಕ್ಕೆ ಕಡಿವಾಣ ಬಿದ್ದಿರಲಿಲ್ಲ.
ಹೀಗಾಗಿ ತೂಕದಲ್ಲಾಗುತ್ತಿದ್ದ ಮೋಸದಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದರು. ಹೀಗಾಗಿ ತೂಕದ ಮಷಿನ್ ಅಳವಡಿಕೆಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.