ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಂ ಸಮುದಾಯ ಮತ್ತೊಂದು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ!
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೋಡೆತ್ತಿನ ಸರ್ಕಾರದಲ್ಲಿ ಈಗಾಗಲೇ ಮುಸ್ಲಿಂ ಸಮುದಾಯದ ಇಬ್ಬರಿಗೆ ಕ್ಯಾಬಿನೆಟ್ ಸ್ಥಾನ ನೀಡಲಾಗಿದೆ. ಹಾಗಿದ್ದರೂ ಈ ಸಮುದಾಯ ಈಗ ಮತ್ತೊಂದು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದೆ.
ಸಿಎಂ ಸಿದ್ಧರಾಮಯ್ಯ ಅವರ ಸಂಪುಟದಲ್ಲಿ ಮುಸ್ಲಿಂ ಸಮಾಜದ ಪ್ರಭಾವಿ ನಾಯಕ ಜಮೀರ್ ಅಹ್ಮದ್ ಮತ್ತು ರಹೀಂ ಖಾನ್ ಮಂತ್ರಿ ಆಗಿದ್ದಾರೆ. ಈಗ 3ನೇ ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಮುಸ್ಲಿಂ ಸಮುದಾಯದ ಶಾಸಕರು.
ಬೆಳಗಾವಿ ಶಾಸಕ ಆಸೀಫ್ (ರಾಜು) ಸೇಠ್ ಬೇಡಿಕೆ
ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿಲ್ಲ. ಹಾಗಾಗಿ ತಮಗೆ ಸಚಿವ ಸ್ಥಾನ ನೀಡಿ ಎಂದು ಬೆಳಗಾವಿ ಶಾಸಕ ಆಸಿಫ್ ಸೇಠ್ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.
ಉಪ ಚುನಾವಣೆ ಫಲಿತಾಂಶಕ್ಕೆ ಗಿಫ್ಟ್ ನೀಡುತ್ತಾರಾ ಸಿಎಂ?
ರಾಜ್ಯದಲ್ಲಿ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಹುತೇಕ ಮುಸ್ಲಿಂ ಸಮುದಾಯ ಕೈ ಹಿಡಿದಿದ್ದರಿಂದಲೇ ಕಾಂಗ್ರೆಸ್ ಗೆಲುವು ಸುಲಭ ಸಾಧ್ಯವಾಗಿದೆ. ಹೀಗಾಗಿ ಸಚಿವ ಸಂಪುಟ ಸರ್ಜರಿ ನಡೆದರೆ ಮುಸ್ಲಿಂ ಸಮುದಾಯಕ್ಕೆ ಸಿಎಂ ಮತ್ತೊಂದು “ಮಂತ್ರಿಗಿರಿ ಗಿಫ್ಟ್ ” ಗಿಫ್ಟ್ ನೀಡುವ ಸಾಧ್ಯತೆಯಿದೆ ಎಂಬ ಚರ್ಚೆ ಶುರುವಾಗಿದೆ. ಆದರೆ, ಯಾರಿಗೆ? ಎಂಬುದು ಯಕ್ಷ ಪ್ರಶ್ನೆ.
ಮಾಜಿ ಸಿಎಂ ಪುತ್ರರನ್ನೇ ಸೋಲಿಸಿ ಬಿಜೆಪಿ ವಶದಲ್ಲಿದ್ದ ಶಿಗ್ಗಾಂವಿ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆಗೆ ತಂದುಕೊಟ್ಟ ಕಾರಣಕ್ಕೆ ನೂತನ ಶಾಸಕ ಪಠಾಣ್ ಗೆ ಸಿಎಂ ಮಣೆ ಹಾಕಿಬಿಟ್ಟಾರು? ಎಂಬ ಶಂಕೆಯಲ್ಲಿ ಬೆಳಗಾವಿ ಶಾಸಕ ಆಸಿಫ್ ಸೇಠ್ ಮುಂಚಿತವಾಗಿ ಟವೆಲ್ ಎಸೆದಿದ್ದಾರೆ.
ಬೆಳಗಾವಿಗೆ ಮತ್ತೊಂದು ಸ್ಥಾನ ನೀಡೋದು..ಗೊತ್ತಿಲ್ಲ ಎಂದ ಸತೀಶ ಜಾರಕಿಹೊಳಿ
ಆದರೆ, ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, “ಆಸಿಫ್ ಸೇಠ್ ಅವರು ಸಚಿವ ಸ್ಥಾನಕ್ಕೆ ಮನವಿ ಮಾಡಿರುವುದು ನಿಜ. ಆದರೆ, ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ನೀಡುವ ಬಗ್ಗೆ ತಮಗೇನು ತಿಳಿದಿಲ್ಲ” ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಅದರಲ್ಲೂ ಬೆಳಗಾವಿಗೇ ಮತ್ತೊಂದು ಸಚಿವ ಸ್ಥಾನದ ಬೇಡಿಕೆ ಬಗ್ಗೆ ಬಹುಶಃ ಅಧಿವೇಶನದ ಬಳಿಕ ಸ್ಪಷ್ಟತೆ ಸಿಗಬಹುದು. ಏನಾಗುತ್ತದೆ ಕಾದು ನೋಡಬೇಕಷ್ಟೇ ಎಂದಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದರು ನಮ್ಮ ಭಾಗದಲ್ಲಿ ಯಾರೂ ಸಚಿವರಾಗಿಲ್ಲ. ಹೀಗಾಗಿ ಶಾಸಕ ಆಸೀಫ್ (ರಾಜು) ಸೇಠ್ ಅವರು ಸಚಿವ ಸ್ಥಾನ ನೀಡಬೇಕೆಂದು ಕೇಳಿದ್ದಾರೆ ಅಷ್ಟೇ, ಆದರೆ ಸಚಿವರನ್ನ ಕೈ ಬಿಡುವುದು ಅಥವಾ ಸೇರಿಸಿಕೊಳ್ಳುವ ಅಧಿಕಾರ, ವ್ಯಾಪ್ತಿ ನನ್ನದಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನೇ ಕೇಳಿ ಎಂದು ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.