Teachers Day: ಶಿಕ್ಷಣ ತಜ್ಞರಾಗಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್ (Dr. Sarvapalli Radhakrishnan) ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಶಿಕ್ಷಣ ನೀಡಲು ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಿತ್ತುವುದರಲ್ಲಿ ಕಳೆದರು. ಶಿಕ್ಷಣಕ್ಕಾಗಿ ಅವರ ಮಹಾನ್ ಕೊಡುಗೆಯನ್ನು ಗೌರವಿಸಲು ಮತ್ತು ರಾಷ್ಟ್ರದ ಮಾರ್ಗದರ್ಶಕ ಶ್ರೇಣಿಯಲ್ಲಿ ನಿಂತಿರುವ ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸಲು ಶಿಕ್ಷಕರ ದಿನವನ್ನು (Teachers Day) ಆಚರಿಸಲಾಗುತ್ತದೆ.
ಶಿಕ್ಷಕರ ದಿನಾಚರಣೆ ಹೇಗೆ ಆರಂಭವಾಯಿತು..!
ಡಾ. ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾಗಿದ್ದಾಗ, ಇವರ ಕೆಲವು ಸ್ನೇಹಿತರು ಮತ್ತು ಅವರ ಮಾಜಿ ವಿದ್ಯಾರ್ಥಿಗಳು ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲು ಅನುಮತಿ ಕೇಳಿದರು.
ಇದಕ್ಕೆ ಉತ್ತರಿಸಿದ ಸರ್ವಪಲ್ಲಿ ರಾಧಾಕೃಷ್ಣನ್, ನೀವು ನನ್ನ ನನ್ನ ಜನ್ಮದಿನವನ್ನು ಆಚರಿಸಲು ಬಯಸುವುದು ಒಳ್ಳೆಯದು . ಆದರೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ನೀಡಿದ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ನೀವು ಈ ದಿನವನ್ನು ಆಚರಿಸಿದರೆ, ನನಗೆ ಅತ್ಯಂತ ಸಂತೋಷವಾಗುತ್ತದೆ ಎಂದು ಹೇಳಿದರು.
ಶಿಕ್ಷಕರ ದಿನದ ಮಹತ್ವಗಳು ಇವು..!
ಶಿಕ್ಷಕ ನಮ್ಮ ಕೈ ಹಿಡಿದು, ನಮ್ಮ ತಪ್ಪುಗಳನ್ನು ಸರಿಪಡಿಸಿ ನಮ್ಮನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ತತ್ವಜ್ಞಾನಿ ಮತ್ತು ಮಾರ್ಗದರ್ಶಿ. ನಮ್ಮ ಜೀವನಕ್ಕೆ ಶಿಕ್ಷಕರ ಕೊಡುಗೆ ಅಮೂಲ್ಯ. ಪ್ರಪಂಚದ ಅನೇಕ ದೇಶಗಳಲ್ಲಿ ಶಿಕ್ಷಕರ ದಿನವು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರನ್ನು ಗೌರವಿಸುವ ವಿಶೇಷ ದಿನವಾಗಿದೆ.
ಈ ದಿನದಂದು ಪ್ರೀತಿಯ ಶಿಕ್ಷಕರಿಗೆ ವಿಶೇಷ ಭಾವನೆ ಮೂಡಿಸಲು ವಿಶೇಷ ಕಾರ್ಯಕ್ರಮಗಳು, ನಾಟಕಗಳು ಮತ್ತು ವಿಸ್ತಾರವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.