ಶ್ರಾವಣ ಮಾಸ ಬಂತು ಅಂದ್ರೆ ಶುರು ಹಬ್ಬಗಳ ಸಾಲು. ಹೆಂಗೆಳೆಯರಿಗಂತೂ ಹೊಸಬಟ್ಟೆ ಖರೀದಿ, ದಿನದಿನವೂ ಮನೆಯಲ್ಲಿ ವಿಶೇಷ ಪೂಜೆ, ರುಚಿ ರುಚಿ ಖಾದ್ಯಗಳ ತಯಾರಿಕೆ ಎಂದು ಸಂಭ್ರಮವೋ ಸಂಭ್ರಮ.
ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲೊಂದಾದ ವರಮಹಾಲಕ್ಷ್ಮಿ ವ್ರತ ಶುಕ್ರವಾರದಂದು ನಡೆಯಲಿದೆ. ಮನೆಗೆ ಸಂಪತ್ತು, ಸಮೃದ್ಧಿ ಕರುಣಿಸು ಎಂದು ದೇವಿ ಲಕ್ಷ್ಮಿಯನ್ನು ಪ್ರಾರ್ಥಿಸುವ, ಪೂಜಿಸುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.
ಸಮುದ್ರ ಮಥನದ ಸಮಯದಲ್ಲಿ ಉದ್ಭವಿಸಿದ ಲಕ್ಷ್ಮಿ, ಸಂಪತ್ತಿನ ಅಧಿದೇವತೆಯಾಗಿ ಎಲ್ಲರಿಗೂ ಬೇಕಾದವಳಾಗಿದ್ದಾಳೆ. ಜೊತೆಗೆ ಮುತ್ತೈದೆ ತನದ ಸಂಕೇತವಾಗಿಯೂ ಆಕೆಯನ್ನು ಆರಾಧಿಸಲಾಗುತ್ತದೆ. ಅಷ್ಟಕ್ಕೂ ಈ ಹಬ್ಬದ ವೈಶಿಷ್ಟ್ಯವೇನು? ಆಚರಣೆ ಹೇಗೆ? ಇಲ್ಲಿದೆ ಮಾಹಿತಿ
ವರಮಹಾಲಕ್ಷ್ಮಿ ವ್ರತ ಎಂದು? ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಈ ಹಬ್ಬವನ್ನು ಆಗಸ್ಟ್ 24 ರಂದು ಆಚರಿಸಲಾಗುತ್ತಿದೆ. ಜಗದೋದ್ಧಾರಕ್ಕಾಗಿ ಶಿವನು ತನ್ನ ಪತ್ನಿ ಪಾರ್ವತಿಗೆ ಸೂಚಿಸಿದ ವ್ರತ ವರಮಹಾಲಕ್ಷ್ಮಿ ವ್ರತ ಎಂಬ ಕಾರಣಕ್ಕೆ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ.
ಹಬ್ಬದ ಹಿನ್ನೆಲೆ- ವೈಶಿಷ್ಟ್ಯ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯ ಬಗ್ಗೆ ಯೋಚಿಸುವುದಾದರೆ ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡಿದ್ದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ, ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬ. ಈ ದಿನ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ವ್ರತಕ್ಕೆ ಸಿದ್ಧತೆ ಹೇಗೆ? ಶ್ರಾವಣ ಹುಣ್ಣಿಮೆಗೂ ಮೊದಲ ಶುಕ್ರವಾರದಂದು ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ ದೇವರ ಕೋಣೆಯನ್ನು ಶುದ್ಧೀಕರಿಸಬೇಕು. ರಂಗೋಲಿ ಬಿಡಿಸಿ, ನಂತರ ಬಾಳೆ ಎಲೆಯ ಮೇಲೆ ಅಕ್ಕಿ ಹಾಕಿ ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ(ಕೆಲವೆಡೆ ಸ್ಟೀಲ್ ಅನ್ನೂ ಉಪಯೋಗಿಸುತ್ತಾರೆ) ಕಳಶ ಇಡಬೇಕು. ಕಳಶದಲ್ಲಿ ನೀರನ್ನು ತುಂಬಿ ಅದಕ್ಕೆ ಸ್ವಲ್ಪ ಒಣದ್ರಾಕ್ಷಿ, ಖರ್ಜೂರಗಳನ್ನು ಹಾಕಬೇಕು. ಕಳಶದಲ್ಲಿ ಮಾವಿನ ಎಲೆ ಮತ್ತು ವೀಳ್ಯದೆಲೆಗಳನ್ನು ಜೋಡಿಸಿ, ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನ ಕಾಯಿಯನ್ನು ಇಡಬೇಕು. ಕೆಲವರು ಆ ತೆಂಗಿನ ಕಾಯಿಯನ್ನೇ ದೇವಿಯ ರೂಪದಲ್ಲಿ ಚಿತ್ರಿಸುತ್ತಾರೆ.
ಸಾಕ್ಷಾತ್ ದೇವಿಯೇ ಪ್ರತ್ಯಕ್ಷವಾದಂತೆ… ಅರಿಶಿಣ ಮೆತ್ತಿ, ದೇವಿಯ ಆಕಾರ ಬರೆದ ಕಳಶಕ್ಕೆ ಸೀರೆ ಉಡಿಸುವುದು ಮತ್ತೊಂದು ಕ್ರಿಯಾಶೀಲ ಕೆಲಸ. ಈ ಹಬ್ಬದ ಅಲಂಕಾರಕ್ಕೆ ಎಷ್ಟೋ ಜನ ಸಾಕಷ್ಟು ಮಹತ್ವ ಕೊಡುತ್ತಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ಅಲಂಕಾರ ನಡೆಯುತ್ತಿದೆ. ಕೆಲವರು ದುಬಾರಿ ಸೀರೆ ಉಡಿಸಿದರೆ, ಕೆಲವರು ಸಾಧಾರಣ ಸೀರೆ ಉಡಿಸುತ್ತಾರೆ. ದೇವಿಗೆ ಬೇಕಾಗಿರುವುದು ಶ್ರದ್ಧೆಯಷ್ಟೆ! ಕಳಶಕ್ಕೆ ಸೀರೆ ಉಡಿಸಿ, ಕಳಶದ ಕೆಳಗೆ ಕೆಲವರು ದೇವಿಯ ಸಣ್ಣ ವಿಗ್ರಹ ಇಡುತ್ತಾರೆ(ಇದೂ ಅನುಕೂಲಕ್ಕೆ ಬಿಟ್ಟಿದ್ದು).
ಪೂಜೆ ಮಾಡುವುದು ಹೇಗೆ? ಯಾವುದೇ ಶುಭಕಾರ್ಯಕ್ಕೂ ಮುನ್ನ ವಿಘ್ನನಾಶಕ ಗಣಪತಿಯ ಆರಾಧನೆ ಸಂಪ್ರದಾಯ. ಅಂತೆಯೇ ಗಣೇಶನನ್ನು ಆರಾಧಿಸಿ. ನಂತರ ಭಕ್ತಿಯಿಂದ ದೇವಿಯನ್ನು ಧ್ಯಾನಿಸುತ್ತ ಪೂಜೆ ಆರಂಭಿಸಿ. ದೇವಿ ಬಿಲ್ವ ವೃಕ್ಷದಲ್ಲಿ ನೆಲೆಸಿದ್ದಾಳೆ ಎಂಬ ಪ್ರತೀತಿ ಇರುವುದರಿಂದ ಬಿಲ್ವ ಪತ್ರೆ ಶ್ರೇಷ್ಠ. ಜೊತೆಗೆ ಹೂವುಗಳನ್ನು ಬಳಸಿ ದೇವಿಯನ್ನು ಅಲಂಕರಿಸಿ. ದೇವಿಯ ವಿಗ್ರಹಕ್ಕೆ ಪಂಚಾಮೃತ(ಹಾಲು, ಮೊಸಲು, ತುಪ್ಪ, ಜೇನುತುಪ್ಪ, ಸಕ್ಕರೆ) ಅಭಿಷೇಕ ಮಾಡುವವರೂ ಇದ್ದಾರೆ. ಇಲ್ಲವೇ ಸರಳವಾಗಿ ದೇವಿಗೆ ಕುಂಕುಮಾರ್ಚನೆ ಮಾಡಿ, ಭಕ್ತಿಯಿಂದ ಧ್ಯಾನಿಸಿದರೂ ಆಗುತ್ತದೆ.
ಸುಮಂಗಲಿಯರ ಕೈಗೆ ದಾರ ಕುಂಕುಮಾರ್ಚನೆಯೊಂದಿಗೆ ಲಕ್ಷ್ಮಿ ದೇವಿಯ ಆವಾಹನೆ ಮಾಡಲಾಗುತ್ತದೆ. ನಂತರ ಹನ್ನೆರಡು ಗಂಟಿನ ದಾರವನ್ನು ದೇವರ ಮುಂದಿಟ್ಟು ಪೂಜಿಸಿ, ಆನಂತರ ಆ ದಾರವನ್ನು ಸುಮಂಗಲಿಯರು ಕೈಗೆ ಕಂಕಣದಂತೆ ಕಟ್ಟಿಕೊಳ್ಳುವ ರೂಡಿ ಇದೆ. ಈ ವ್ರತವನ್ನು ವಿವಾಹಿತ ಮಹಿಳೆಯರು ಒಂಬತ್ತು ವರ್ಷಗಳ ಕಾಲ ಸತತವಾಗಿ ಮಾಡುವುದರಿಂದ ಫಲಲಭಿಸುತ್ತದೆ ಎಂಬ ನಂಬಿಕೆ ಇದೆ.
ಬೆಲ್ಲ-ತುಪ್ಪದ ತಿನಿಸು ಶ್ರೇಷ್ಠ ಈ ದಿನ ಬೆಲ್ಲ ಮತ್ತು ತುಪ್ಪದಿಂದ ತಯಾರಿಸಿದ ತಿನಿಸು ಶ್ರೇಷ್ಠ. ಹಬ್ಬ ಮುಗಿದ ನಂತರ ದಾನ-ಧರ್ಮ ಮಾಡುವುದು ಮತ್ತು ಒಂದಷ್ಟು ಜನರಿಗೆ ಊಟ ಹಾಕಿಸುವುದು ಶ್ರೇಷ್ಠ. ಹಿರಿಯ ಮುತ್ತೈದೆಯರಿಗೆ ಬಾಗಿನ ನೀಡುವುದರಿಂದ ಸಮೃದ್ಧಿ ಪ್ರಾಪ್ತಿಸುತ್ತದೆ ಎಂಬ ನಂಬಿಕೆ ಇದೆ. ಈ ವ್ರತದಲ್ಲಿ ಲಕ್ಷ್ಮಿ ಮತ್ತು ನಾರಾಯಣ ಇಬ್ಬರನ್ನೂ ಪೂಜಿಸಬೇಕು.