ತಿರುಪತಿ (ಆಂಧ್ರ ಪ್ರದೇಶ): ಇಲ್ಲಿನ ಹಿಂದೂಗಳ ಶ್ರದ್ಧಾ ಕೇಂದ್ರ ತಿಮ್ಮಪ್ಪನ ದೇವಸ್ಥಾನಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ಪಕ್ಷ ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಇತ್ತೀಚಿಗೆ ಲಡ್ಡು ಪ್ರಸಾದದಲ್ಲಿ ವಿವಾದ ಸೃಷ್ಟಿಸಿದ್ದ ಪಕ್ಷದ ಶಾಸಕರ ಹೆಸರು ರಿಲ್ಸ್ ವಿಚಾರದ ಪ್ರಕರಣದಲ್ಲಿ ಕೇಳಿ ಬಂದಿದೆ.
ತಿರುಪತಿಯ ವೆಂಕಟೇಶ್ವರ ಸನ್ನಿಧಿಯಲ್ಲಿ ತನ್ನ ಲಿವ್ ಇನ್ ಸಂಗಾತಿಯಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ (ಎಂಎಲ್ಸಿ) ದುವ್ವಾಡ ಶ್ರೀನಿವಾಸ್ ಜೊತೆ ಸೇರಿ ರೀಲ್ಸ್ ಮಾಡಿದ್ದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ದಿವ್ವಳ ಮಾಧುರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೇವಸ್ಥಾನದ ಬ್ರಹ್ಮರಥೋತ್ಸವದ ಸಮಯದಲ್ಲಿ ಮಾಧುರಿ ತನ್ನ ಸಂಗಾತಿ ಶ್ರೀನಿವಾಸ್ ಜೊತೆ ಸೇರಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರು ಮತ್ತು ಪವಿತ್ರ ಮಾಡಾ ಬೀದಿಯಲ್ಲಿ ರೀಲ್ಸ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ನೀಡಿದ ದೂರಿನ ಅನ್ವಯ ತಿರುಮಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪ ತಳ್ಳಿ ಹಾಕಿದ ಮಾಧುರಿ:
ತಮ್ಮ ವಿರುಧ್ದ ಕೇಳಿಬಂದ ಆರೋಪವನ್ನು ತಳ್ಳಿಹಾಕಿರುವ ಮಾಧುರಿ ಅವರು, ಈ ಹಿಂದೆ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವಿರುದ್ಧ ಕಾಮೆಂಟ್ ಮಾಡಿದ್ದಕ್ಕೆ ಇವಾಗ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುವೆ ಎಂದು ಹೇಳಿದ್ದಾರೆ.