ನವದೆಹಲಿ: ಜಂಟಿ ವಿಶೇಷ ಕಾರ್ಯಾಚರಣೆಯಲ್ಲಿ ಗುಜರಾತ್‌ನ ಅಂಕಲೇಶ್ವರದಲ್ಲಿ 5,000 ಕೋಟಿ ರು. ಮೌಲ್ಯದ 518 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ದೆಹಲಿ ಮತ್ತು ಗುಜರಾತ್ ಪೊಲೀಸರು ಜಂಟಿ ತಂಡವಾಗಿ ಭಾನುವಾರ ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿಯ ಆವರಣದ ಮೇಲೆ ದಾಳಿ ನಡೆಸಿದ್ದು, ಈ ವೇಳೆ 518 ಕೆಜಿ ಡ್ರಗ್ಸ್ ಪತ್ತೆಯಾಗಿದೆ.
ದೆಹಲಿ ಪೊಲೀಸ್ ವಿಶೇಷ ಘಟಕವು ಇತ್ತೀಚೆಗೆ ದೆಹಲಿಯಲ್ಲಿ ಕೈಗೊಂಡಿದ್ದ ಎರಡು ಕಾರ್ಯಾಚರಣೆಗಳಲ್ಲಿ 700 ಕೆಜಿಗೂ ಅಧಿಕ ಕೊಕೇನ್ ವಶಪಡಿಸಿಕೊಂಡಿತ್ತು. ಆ ಪೈಕಿ ಅ.2 ರಂದು ದಕ್ಷಿಣ ದೆಹಲಿಯಲ್ಲಿ 500 ಕೆಜಿ ಕೊಕೇನ್ ವಶಪಡಿಸಿಕೊಂಡರೆ, ರಮೇಶ್ ನಗರ ಪ್ರದೇಶದ ಮೇಲೆ ಮಾಡಿದ ದಾಳಿಯಲ್ಲಿ 200 ಕೆಜಿ ಕೊಕೇನ್ ಪತ್ತೆಯಾಗಿತ್ತು. ಇವುಗಳ ಮೌಲ್ಯ 5600 ಕೋಟಿ ರು. ಆಗಿತ್ತು.
ಅಕ್ಟೋಬರಲ್ಲಿ ಭರ್ಜರಿ ಬೇಟೆ:
ಇದಲ್ಲದೆ ಮಧ್ಯಪ್ರದೇಶದಲ್ಲೂ 2000 ಕೋಟಿ ರು. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಭಾನುವಾರದ ದಾಳಿಯೂ ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ ಒಟ್ಟು 1,289 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಥಾಯ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಮೌಲ್ಯ 13,000 ಕೋಟಿ ರು. ಆಗಿದೆ.