ದಾವಣಗೆರೆ: ವಕ್ಫ್ ಮಂಡಳಿ ಸರ್ಕಾರಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಬೋರ್ಡ್ ಹಾಕುವ ಮೂಲಕ ರೈತರ ಜಮೀನನ್ನು ವಶಪಡಿಸಿಕೊಳ್ಳುವ ವಕ್ಫ್ ಕಾಯ್ದೆಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ವಕ್ಫ್ ಮಂಡಳಿ ವಶಪಡಿಸಿಕೊಂಡಿರುವ ರೈತರು, ಹಿಂದೂ ಧಾರ್ಮಿಕ ಕೇಂದ್ರಗಳ ಆಸ್ತಿಗಳನ್ನು ತಕ್ಷಣ ಮರಳಿಸಬೇಕು. ರೈತರ ಆಸ್ತಿಗಳು ವಕ್ಫ್ ಹೆಸರಿನಲ್ಲೇ ಉಳಿದರೆ, ಅದಕ್ಕೆ ತಕ್ಕ ಪರಿಣಾಮವನ್ನು ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸರ್ಕಾರಗಳೇ ಸಾರ್ವಜನಿಕರ ಉಪಯೋಗಕ್ಕಾಗಿ ರೈತರು ಅಥವಾ ಸಾರ್ವಜನಿಕರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ವೇಳೆ ಪರಿಹಾರ ನೀಡುತ್ತದೆ. ಆದರೆ, ವಕ್ಫ್ ಮಂಡಳಿ ಒಂದು ಬೋರ್ಡ್ ಹಾಕಿ ಆಸ್ತಿ ತನ್ನದೆನ್ನುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಸರ್ಕಾರ ಭೂ ಸ್ವಾಧೀನಪಡಿಸಿಕೊಂಡ ಜಾಗದ ವಿಚಾರ ಪರಿಹಾರಕ್ಕೆ ಮುಗಿಯದೇ, ನ್ಯಾಯಾಲಯದ ಮೆಟ್ಟಿಲೇರಿದರೆ ಕೋರ್ಟ್ ಹೇಳುವ ಪರಿಹಾರ ನೀಡಿ, ಜಮೀನುಗಳನ್ನು ವಶಪಡಿಸಿಕೊಳ್ಳಬೇಕು. ಆದರೆ, ವಕ್ಫ್ ಮಂಡಳಿ ಸರ್ಕಾರಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದು ಬೋರ್ಡ್ ಹಾಕಿ, ಇದು ನಮಗೆಬೇಕೆಂದು ವಶಪಡಿಸಿಕೊಳ್ಳುವುದೇ ಖಂಡನೀಯ ಎಂದು ಆಕ್ಷೇಪಿಸಿದರು.
ಸರ್ಕಾರ ಮೊದಲು ವಕ್ಫ್ ಮಂಡಳಿಯ ಇಂತಹ ಕಾನೂನನ್ನು ತಕ್ಷಣ ಹಿಂಪಡೆಯಬೇಕು. ವಕ್ಫ್ ಮಂಡಳಿ ವಶಪಡಿಸಿಕೊಂಡ ರೈತರು, ಹಿಂದೂ ಧಾರ್ಮಿಕ ಕೇಂದ್ರಗಳ ಆಸ್ತಿಗಳನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಇದು ಕೇವಲ ಮಾತಿನಲ್ಲೇ ಉಳಿದು, ರೈತರ ಆಸ್ತಿಗಳು ವಕ್ಫ್ ಬೋರ್ಡ್ ನ ಹೆಸರಿನಲ್ಲೇ ಉಳಿದರೆ, ಅದಕ್ಕೆ ಪರಿಣಾಮವನ್ನು ರಾಜ್ಯ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.