ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರಿಗೆ ಆರ್‌ಟಿಒ ಇನ್ಸಪೆಕ್ಟರ್ ಮಂಜುನಾಥ ಕೊರವಿ ಆವಾಜ್ ಹಾಕಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಲಾಲ್‌ಬಾಗ್ ಬಳಿ ಅ.29ರಂದು ವಾಗ್ವಾದ ನಡೆದಿದ್ದು, ಘಟನೆಯ ವಿಡಿಯೋ ಶನಿವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ 12 ಗಂಟೆಯ ಒಳಗೆ (ಭಾನುವಾರ) ಸಾರಿಗೆ ಇಲಾಖೆಯ ಆಯುಕ್ತರು ಮಂಜುನಾಥ ಅವರನ್ನು ರಾಯಚೂರು ಜಿಲ್ಲೆಗೆ ವರ್ಗಾವಣೆ ಮಾಡಿ, ಕಚೇರಿಯಲ್ಲಿಯೇ ಕೆಲಸ ನಿರ್ವಹಿಸುವಂತೆ ಆದೇಶಿಸಿದ್ದಾರೆ.
ವಾಗ್ವಾದ ನಡೆದಿದ್ದು ಏಕೆ:
ರಾತ್ರಿ ವೇಳೆ ಲಂಚ ವಸೂಲಿ ಮಾಡಿ ಜನರಿಗೆ ತೊಂದರೆ ಕೊಡುತ್ತಿಯಾ? ಎಂದು ಶಾಸಕರು ಅ.29ರಂದು ಪ್ರಶ್ನಿಸಿದ್ದರು. ಈ ವೇಳೆ ಆಕ್ರೋಶಗೊಂಡು ಮಂಜುನಾಥ್, ಬೆಲ್ದಾಳೆ ಅವರ ಎದುರೇ ಚಿಟಕಿ ಹೊಡೆದು, ನಾನು ಅಧಿಕಾರಿ ಮಾತ್ರವಲ್ಲ ಎಲ್ಲ ಬಲ್ಲವನಾಗಿದ್ದೇನೆ. ನೀನು ಇಲ್ಲಿಯ ಎಂಎಲ್‌ಎ ಇರಬಹುದು. ನಾನು ಇಡೀ ರಾಜ್ಯನೇ ಸುತ್ತಿದ್ದು, ನಿಮ್ಮಂಥ ಸಾಕಷ್ಟು ಜನ ನೋಡಿದ್ದೀನಿ ಎಂದು ಶಾಸಕರ ವಿರುದ್ಧವೇ ಕಿಡಿ ಕಾರಿದ್ದರು. ಇದರಿಂದ ಕೆರಳಿ ಕೆಂಡವಾದ ಬೆಲ್ದಾಳೆ ಅವರು, ಅಧಿಕಾರಿಯ ಈ ವರ್ತನೆಯನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುವದಾಗಿ ಎಚ್ಚರಿಸಿದರು. ಅಲ್ಲದೆ ಈ ಬಗ್ಗೆ ಸಚಿವರು ಮತ್ತು ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು.