ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತ ನಮ್ಮ ಧ್ಯೇಯ, ಇಂಧನ ಅಭಿವೃದ್ಧಿ ನಮ್ಮ ಧ್ಯೇಯ ಎಂದು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಘೊಷಿಸಿದ್ದಾರೆ.
ಅವರು ಇಂದು ರಾಜ್ಯಸಭೆಯಲ್ಲಿ ಇಂಧನ ಸಚಿವಾಲಯದ ಕಾರ್ಯವನ್ನು ಎತ್ತಿ ತೋರಿಸಿದ್ದಾರೆ. ನವೀಕರಿಸಬಹುದಾದ ಇಂಧನವು ಕೇವಲ ಒಂದು ಆಯ್ಕೆಯಲ್ಲ, ಅದು ರಾಷ್ಟ್ರದ ಸ್ಥಿರತೆಗೆ ಅವಶ್ಯಕವಾಗಿದೆ. ಇದು ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ವಿಶ್ವದ ದೊಡ್ಡ ಆರ್ಥಿಕತೆ ಹೊಂದಿರುವ ಎಲ್ಲಾ ದೇಶಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹೀಗಾಗಿ, ಇದಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಂದು ಭಾರತವು ಆರ್‌ಇ ಅಳವಡಿಕೆಯಲ್ಲಿ ಜಾಗತಿಕವಾಗಿ ನಾಲ್ಕನೇ ಸ್ಥಾನವನ್ನು ಸಾಧಿಸಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ನಾವು ಪವನ ಶಕ್ತಿ ಸಾಮರ್ಥ್ಯದಲ್ಲಿ ನಾಲ್ಕನೇ ಮತ್ತು ಸೋಲಾರ್ ಪಿವಿ ಸಾಮರ್ಥ್ಯದಲ್ಲಿ ಐದನೇ ಸ್ಥಾನದಲ್ಲಿದ್ದೇವೆ. ಕಳೆದ 10 ವರ್ಷಗಳಲ್ಲಿ ಭಾರತವು ಆರ್‌ಇ ಯೋಜನೆಗಳಲ್ಲಿನ ಹೂಡಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಕಂಡಿದೆ ಎಂದು ಅವರು ಹೇಳಿದ್ದಾರೆ.2030ರಲ್ಲೂ ನಾವು ಇಲ್ಲೇ ಇರುತ್ತೇವೆ. ನೀವು ಅಲ್ಲೇ ಇರುತ್ತೀರಿ. 500GW ಸಾಮರ್ಥ್ಯವನ್ನು ಸಾಧಿಸಿದ ವಿಚಾರವನ್ನು ಹೆಮ್ಮೆಯಿಂದ ಹಂಚಿಕೊಳ್ಳುತ್ತೇವೆ ಎಂದರು.