ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರನ್ನು ಲಿಫ್ಟ್ ಮಾಡಲು ಬಳಸಿದ ವಿದ್ಯುತ್ ಬಿಲ್ ಪಾವತಿ ಮಾಡದೆ ಬಾಕಿ ಉಳಿದಿದ್ದು, ಸರಿಯಾದ ಸಮಯಕ್ಕೆ ಹಣ ಕಟ್ಟದಿದ್ದರೆ ವಿದ್ಯುತ್ ಸರಬರಾಜು ಬಂದ್ ಮಾಡಬೇಕಾಗುತ್ತದೆ ಎಂದು ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ) ಎಚ್ಚರಿಕೆ ನೀಡಿದೆ.
ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭೂ ಸ್ವಾಧೀನ ಸೇರಿ ಕಾಮಗಾರಿಗಳಿಗೆ ಪಾವತಿಸಲು ಬರೋಬ್ಬರಿ 2500 ಕೋಟಿ ರುಪಾಯಿಯಷ್ಟು ಮೊತ್ತ ಬಾಕಿ ಇದೆ.
ಭದ್ರಾ ಜಲಾಶಯದಿಂದ ಎರಡು ಹಂತಗಳಲ್ಲಿ ಲಿಫ್ಟ್ ಮಾಡಿದ ನೀರಿನ ವಿದ್ಯುತ್ ಬಿಲ್ ಬಾಕಿ 17.77 ಕೋಟಿ ರುಪಾಯಿಯಷ್ಟಿದ್ದು ಮೊತ್ತ ಪಾವತಿಸದಿದ್ದರೆ ಸಂಪರ್ಕ ಕಡಿತದಂತಹ ಅನಿವಾರ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೆಸ್ಕಾಂ ಎಚ್ಚರಿಸಿದೆ.
21,473 ಕೋಟಿ ರುಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಗೆ ಈವರೆಗೂ ರಾಜ್ಯ ಸರ್ಕಾರ 9740 ಕೋಟಿ ರುಪಾಯಿ ಪಾವತಿಸಿದೆ. 2500 ಕೋಟಿ ರು.ನಷ್ಟು ಬಿಲ್ ಬಾಕಿ ಉಳಿದಿದೆ. ಕೇಂದ್ರ ಸರ್ಕಾರ 2023-24 ನೇ ಸಾಲಿನ ಬಜೆಟ್‌ನಲ್ಲಿ 5300 ಕೋಟಿ ರುಪಾಯಿ ಅನುದಾನ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಒಂದೂ ಬಿಡಿಗಾಸು ಬಿಡುಗಡೆ ಮಾಡಿಲ್ಲ.
ಹಾಗಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಒಂದಿಬ್ಬರು ಗುತ್ತಿಗೆದಾರರು ಫೀಲ್ಡ್‌ನಿಂದ ಹೊರ ಹೋಗಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ ಪ್ರಮಾಣದ ಏತನೀರಾವರಿ(ಲಿಫ್ಟ್) ಯೋಜನೆಯಾಗಿದ್ದು, ಪ್ರಮುಖವಾಗಿ ವಿದ್ಯುತ್ ಶಕ್ತಿಯನ್ನೇ ಅವಲಂಬಿಸಿದೆ.