ಬೆಂಗಳೂರು: ಪ್ರೀತಿ-ಪ್ರೇಮದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪದ ಮೇರೆಗೆ ಕೇರಳ ಮೂಲದ ಯುವಕನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಬಿಲಾಲ್ ರಫಿಕ್ ಬಂಧಿತ ಆರೋಪಿ. ಪ್ರಕರಣ ಸಂಬಂಧ ಯುವಕನ ತಂದೆ-ತಾಯಿ ವಿರುದ್ದವೂ ಕೇಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಗೆ 2021ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಕೇರಳ ಮೂಲದ ಬಿಲಾಲ್ ರಫೀಕ್‌ನ ಪರಿಚಯವಾಗಿತ್ತು. ಪರಿಚಯ ಫೋನ್‌ಗೆ ಬಂದು ಪರಸ್ಪರ ಪ್ರೀತಿಗೆ ತಿರುಗಿತ್ತು. ಈ ಸಂದರ್ಭದಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ ಬಿಲಾಲ್ ರಫೀಕ್, 2 ಬಾರಿ ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳಸಿದ್ದ. ಎರಡೂ ಬಾರಿಯೂ ಆಕೆ ಗರ್ಭಿಣಿಯಾದಾಗ ಆತನೇ ಪುಸಲಾಯಿಸಿ ಗರ್ಭಪಾತ ಮಾಡಿಸಿದ್ದನಂತೆ.
2024ರಲ್ಲಿ ಮೂರನೇ ಬಾರಿ ಯುವತಿ ಗರ್ಭಿಣಿಯಾಗುತ್ತಿದ್ದಂತೆ ಯುವತಿಯ ಬಲವಂತದಿಂದ ಬಿಲಾಲ್ ರಫಿಕ್ ಮದುವೆಗೆ ಒಪ್ಪಿದ್ದ. ಎರಡು ಕುಟುಂಬದವರೂ ಮದುವೆಗೆ ಸಮ್ಮತಿ ನೀಡಿದ್ದರು. ಇದಾದ ಬಳಿಕ ಬಿಲಾಲ್ ರಫಿಕ್ ತಂದೆ-ತಾಯಿ ಯುವತಿಯ ಪೋಷಕರಿಂದ ಹಣ, ಒಡವೆಯನ್ನು ಪಡೆದಿದ್ದಾರೆ. ಕೆಲ ದಿನಗಳ ಬಳಿಕ ಬಿಲಾಲ್ ರಫಿಕ್ ಪೋಷಕರು ಹಾಗೂ ಆತನ ಸಹೋದರಿ ಕರೆ ಮಾಡಿ ಮದುವೆಯಾಗಲು ಒಪ್ಪಲ್ಲ ಎಂದು ಕ್ಯಾತೆ ತೆಗೆದಿದ್ದಾರೆ. ಮದುವೆಯಾದರೆ ಜೀವಸಹಿತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರಂತೆ. ಸದ್ಯ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.