Mukhyamantri Chandru Biography: ಚಂದ್ರು (Mukhyamantri Chandru) ಅವರು ಆಗಸ್ಟ್ 28,1953 ರಂದು ನೆಲಮಂಗಲ ತಾಲೂಕಿನ ಹೊನ್ನಸಂದ್ರದಲ್ಲಿ ಜನಿಸಿದರು. ಇವರ ತಂದೆ ಎನ್.ನರಸಿಂಹಯ್ಯ,ತಾಯಿ ತಿಮ್ಮಮ್ಮ.
ಚಂದ್ರು ಅವರ ಮೂಲ ಹೆಸರು ಚಂದ್ರಶೇಖರ್. ರಂಗಭೂಮಿ, ಕಿರುತೆರೆ ಮತ್ತು ಅನೇಕ ಕನ್ನಡ ಸಿನೆಮಾದಲ್ಲಿ ನಟಿಸಿದ ಇವರು ಮುಖ್ಯಮಂತ್ರಿ ಚಂದ್ರ ಎಂದೇ ಖ್ಯಾತಿ ಪಡೆದಿದ್ದಾರೆ. ಇಷ್ಟೇ ಅಲ್ಲದೆ ಇವರು ರಾಜಕೀಯದಲ್ಲಿಯೂ ಸಕ್ರೀಯರಾಗಿದ್ದಾರೆ. ಇವರು ಬಾಲ್ಯದಲ್ಲಿ ತುಂಬಾ ತುಂಟ. ಹೀಗಾಗಿ ತಂದೆ ತಾಯಂದಿರು ಇವರನ್ನು ಸಿದ್ಧಗಂಗಾ ಮಠಕ್ಕೆ ಸೇರಿಸಿದರು. ಅಲ್ಲೇ ಇವರು ವಿದ್ಯಾಬ್ಯಾಸ ಮುಗಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರು ಅವರ ರಂಗಭೂಮಿ ಪ್ರವೇಶ ಹೇಗಿತ್ತು ಗೊತ್ತಾ?
ಹುತ್ತವ ಬಡಿದರೆ ಎಂಬ ನಾಟಕದಲ್ಲಿ ಅಭಿನಯಿಸಬೇಕಿದ್ದ ಒಬ್ಬ ಪಾತ್ರಧಾರಿಗೆ ಅನಾರೋಗ್ಯ ಕಾಡಿದ ಕಾರಣ ಅವರ ಪಾತ್ರದಲ್ಲಿ ಚಂದ್ರಶೇಖರ್ ಅಭಿನಯಿಸಿದರು. ಈ ಮೂಲಕ ರಂಗಭೂಮಿಗೆ ಕಾಲಿಟ್ಟರು.
ಅವರು ಆ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಬೇಕಾಗಿ ಬಂತು. ಈ ಮೂಲಕ ರಂಗಭೂಮಿಗೆ ಒಗ್ಗಿಕೊಂಡ ಚಂದ್ರಶೇಖರ್ ನಾಟಕದ ಡಿಪ್ಲೋಮಾ ಪಡೆದರು. ‘ಮುಖ್ಯಮಂತ್ರಿ’ ನಾಟಕದ ಪಾತ್ರಕ್ಕೆ ಅವರು ಜೀವ ತುಂಬಿದ ಹಿನ್ನಲೆಯಲ್ಲಿ ಚಂದ್ರಶೇಖರ್ ಅವರು ‘ಮುಖ್ಯಮಂತ್ರಿ ಚಂದ್ರು’ ಎಂದು ಖ್ಯಾತಿ ಪಡೆದರು.
ಚಿತ್ರರಂಗದಲ್ಲಿಯೂ ʼಮುಖ್ಯಮಂತ್ರಿ ಚಂದ್ರುʼ ಆಗಿಯೇ ಮಿಂಚಿದ ನಟ!
ಚಂದ್ರಶೇಖರ್ ಅವರು ಚಲನಚಿತ್ರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಸಮಯದಲ್ಲಿ ಮತ್ತೊಬ್ಬ ಚಂದ್ರಶೇಖರ್ ಇದ್ದರು. ಅವರು ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದರು.
ಹಾಗಾಗಿ ಕನ್ನಡ ಚಲನಚಿತ್ರ ರಂಗದಲ್ಲೂ ಇವರ ಹೆಸರು ‘ಮುಖ್ಯಮಂತ್ರಿ ಚಂದ್ರು’ ಎಂದು ಖಾಯಂ ಆಯಿತು. ಮುಖ್ಯಮಂತ್ರಿ ಚಂದ್ರು ಕನ್ನಡದಲ್ಲಿ ನಾನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲು ‘ಹೊಸ ಮೇಡಂ’, ‘ಫಣಿಯಮ್ಮ’ ಚಿತ್ರಗಳಲ್ಲಿ ಕಾಣಿಸಿಕೊಂಡ ಚಂದ್ರು ಅವರಿಗೆ ಖ್ಯಾತಿ ತಂದುಕೊಟ್ಟ ಚಿತ್ರ ಮುಯ್ಯಿ.
ಸಿನೆಮಾಗೂ ಸೈ, ಸೀರಿಯಲ್‌ಗೂ ಜೈ ಎನ್ನುವ ಮುಖ್ಯಮಂತ್ರಿ ಚಂದ್ರು!
1983 ರಲ್ಲಿ ಬಂದ ಚಕ್ರವ್ಯೂಹ ಚಿತ್ರದ ಮೂಲಕ ಮುಖ್ಯಮಂತ್ರಿ ಚಂದ್ರು ಬೆಳ್ಳಿ ತೆರೆಯ ಜರ್ನಿ ಆರಂಭಿಸಿದ್ದರು. ಮುಖ್ಯಮಂತ್ರಿ ಚಂದ್ರು ಅವರು ರಂಗಭೂಮಿ, ಸಿನಿಮಾದಲ್ಲೇ ಹೆಚ್ಚು ಕೆಲಸ ಮಾಡಿದವರು.
ಆದರೆ ಇತ್ತೀಚೆಗೆ ಸೀರಿಯಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಝೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾ ರಾಮ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಸೀತಾ ರಾಮ ಸೀರಿಯಲ್‌ನಲ್ಲಿ ಚಂದ್ರು ಹಾಸ್ಯ ಕೂಡ ಮಾಡುತ್ತಾರೆ. ಒಂದು ಮನೆಯ ಮುಖ್ಯಸ್ಥನಾಗಿ ಹೇಗೆ ಪಾತ್ರ ಮಾಡಬೇಕೋ ಹಾಗೇ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಚಂದ್ರು ಅವರ ರಾಜಕೀಯ ಜೀವನ!
ರಾಮಕೃಷ್ಣ ಹೆಗ್ಗಡೆ ಅವರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ದುಮುಕಿದರು ಮುಖ್ಯಮಂತ್ರಿ ಚಂದ್ರು. ಗೌರಿಬಿದನೂರಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಭಾಜಪದ ಸಕ್ರಿಯ ಕಾರ್ಯಕರ್ತರಾಗಿದ್ದರು.
ನಂತರ ಕರ್ನಾಟಕ ವಿಧಾನ ಪರಿಷತ್‌ನ ಸದಸ್ಯರಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೂಡಾ ಚಂದ್ರು ಸೇವೆ ಸಲ್ಲಿಸಿದ್ದಾರೆ. ಸದ್ಯ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಮುಖ್ಯಮಂತ್ರಿ ಚಂದ್ರು ಅವರು ಜನಪರ ಸೇವೆಗಳಲ್ಲಿ ನಿರತರಾಗಿದ್ದಾರೆ.
ಮುಖ್ಯಮಂತ್ರಿ ಚಂದ್ರು ಹೆಸರು ಖಾಯಂ ಆಗಿದ್ದು ಹೇಗೆ ಗೊತ್ತಾ?
ಮುಖ್ಯಮಂತ್ರಿ ಚಂದ್ರು ಅವರ ನಿಜವಾದ ಹೆಸರು ಚಂದ್ರಶೇಖರ್. ಆದರೆ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿ ಜನಪ್ರಿಯರಾಗಿದ್ದರಿಂದ ಅವರಿಗೆ ಮುಖ್ಯಮಂತ್ರಿ ಎಂಬ ಬಿರುದು ಬಂದಿದೆ.
ಆದರೆ ಸಿನೆಮಾ ರಂಗ ಪ್ರವೇಶ ಮಾಡಿದ ನಂತರವೂ ಕನ್ನಡದಲ್ಲಿ ಅನೇಕ ಚಂದ್ರಶೇಖರ್ ಎಂಬ ಹೆಸರಿನ ನಟರಿದ್ದ ಕಾರಣದಿಂದ ಅವರ ಹೆಸರು ಮುಖ್ಯಮಂತ್ರಿ ಚಂದ್ರು ಎಂಬುದಾಗಿ ಖಾಯಂ ಆಗಿ ಉಳಿಯಿತು. ಇದರ ಬಗ್ಗೆ ಚಂದ್ರು ಅವರೇ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಟಿ ವಿ 9 ಯೂಟ್ಯೂಬ್ ಚಾನಲ್‌ನಲ್ಲಿದೆ.
ಮುಖ್ಯಮಂತ್ರಿ ಚಂದ್ರು ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್!
1983ರಲ್ಲಿ ಮುಖ್ಯಮಂತ್ರಿ ಚಂದ್ರು ಹಾಗೂ ಪದ್ಮಾ ಅವರು ವಿವಾಹವಾದರು. ಮುಖ್ಯಮಂತ್ರಿ ಚಂದ್ರು ಹಾಗೂ ಪದ್ಮಾ ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಮನೆಯಲ್ಲಿ ಹುಡುಗಿ ನೋಡಿಕೊಂಡು ಬಾ ಎಂದು ಚಂದ್ರು ಅವರಿಗೆ ಮನೆಯವರು ಹೇಳಿದ್ರಂತೆ.
ಆಗ ಚಂದ್ರು ಶಿರಾಗೆ ಹೋಗಿದ್ರು. ಊಟ ಬಡಿಸುವಾಗ ಯಾರು ತುಪ್ಪ ಹಾಕುತ್ತಾರೋ ಅವರೇ ಹುಡುಗಿ. ಹಾಗಾಗಿ ಚಂದ್ರು ಇನ್ನೊಮ್ಮೆ ತುಪ್ಪ ಬೇಕು ಅಂತ ಹೇಳಿ ಇನ್ನೊಂದು ಸಲ ಹುಡುಗಿ ಮುಖ ನೋಡಿದಂದ್ರೆ. ಇವರಿಬ್ಬರಿಗೂ ಭರತ್, ಶರತ್ ಎಂಬ ಮಕ್ಕಳಿದ್ದಾರೆ.
ಮುಖ್ಯಮಂತ್ರಿ ಚಂದ್ರು ಅಭಿನಯಕ್ಕೆ ಮೆಚ್ಚಿ ಕಾರ್ ಗಿಫ್ಟ್ ನೀಡಿದ್ದ ರವಿಚಂದ್ರನ್ ತಂದೆ
1983ರಲ್ಲಿ ‘ಚಕ್ರವ್ಯೂಹ’ ಸಿನಿಮಾ ನಿರ್ಮಾಣ ಮಾಡಿದ್ದ ಎನ್. ವೀರಸ್ವಾಮಿ ಅವರು ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಅವರ ಅಭಿನಯಕ್ಕೆ ಮೆಚ್ಚಿ ಕಾರನ್ನು ಗಿಫ್ಟ್ ಆಗಿ ನೀಡಿದ್ದರಂತೆ. .
ಈ ಚಿತ್ರದಲ್ಲಿ ಅಂಬರೀಷ್, ಮುಖ್ಯಮಂತ್ರಿ ಚಂದ್ರು ಮೊದಲಾದವರು ನಟಿಸಿದ್ದರು. ಈ ಸಿನಿಮಾ ಹಿಟ್ ಆದ ಬಳಿಕ ವೀರಸ್ವಾಮಿ ಅವರು ಓಡಿಸುತ್ತಿದ್ದ ಅಂಬಾಸಿಡರ್ ಕಾರಿನ ಕೀಯನ್ನು ಚಂದ್ರು ಅವರಿಗೆ ಕೊಟ್ಟು ” ನೀನು ಈ ಕಾರಿನಲ್ಲಿ ಓಡಾಬೇಕು ಎಂದಿದ್ದರಂತೆ’ ಈ ಕುರಿತಾಗಿ ಮುಖ್ಯಮಂತ್ರಿ ಚಂದ್ರು ಮಾಹಿತಿ ಹಂಚಿಕೊಂಡಿದ್ದಾರೆ.
https://vijayaprabha.com/how-is-monkeypox-spread/