ಬೆಂಗಳೂರು: ರಾಜಧಾನಿಯಲ್ಲಿ ಬಹು ಬೇಡಿಕೆಯ ಹಾಗೂ ಸಾವಿರಾರು ಜನರಿಗೆ ಅನುಕೂಲವಾಗಿರುವ ಮೆಟ್ರೋ ಪ್ರಯಾಣ ಇನ್ನುಮುಂದೆ ಜೇಬಿಗೆ ಮತ್ತಷ್ಟು ಕತ್ತರಿ ಹಾಕಲಿದ್ದು, ಇದರ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಲು ಮೆಟ್ರೋ ಮತ್ತಷ್ಟು ಸಮಯಾವಕಾಶ ನೀಡಿದೆ.
ಹೌದು, ಟಿಕೆಟ್ ದರ ಹೆಚ್ಚಳ ಮಾಡಲು ಮುಂದಾಗಿರುವ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಿಸುವ ಸಂಬಂಧ ಆಹ್ವಾನಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಅವಧಿಯನ್ನು ಅ.28ರವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ವಿಸ್ತರಿಸಿದೆ. ಎಷ್ಟು ದರ ಏರಿಕೆ ಮಾಡಬೇಕೆಂದು ಈ ಕುರಿತು ರಚಿಸಿರುವ ಸಮಿತಿಗೆ ಸಾರ್ವಜನಿಕರು ಅಭಿಪ್ರಾಯ, ಸಲಹೆ ನೀಡಬಹುದಾಗಿದೆ.
ಹಾಲಿ ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರ ₹10 ನಿಂದ ಗರಿಷ್ಠ ದರ ₹60 ವರೆಗಿದೆ. ಈಗ ಶೇ.15 ರಿಂದ ಶೇ.20 ರಷ್ಟು ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆಯಿದೆ. ಬಹುತೇಕ ಮುಂದಿನ ತಿಂಗಳಿಂದ ಹೊಸ ದರ ಜಾರಿ ಮಾಡುವ ಸಿದ್ಧತೆಯನ್ನು ಬಿಎಂಆರ್‌ಸಿಎಲ್ ಮಾಡಿಕೊಂಡಿದೆ. ದರ ಎಷ್ಟರ ಮಟ್ಟಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಬಿಎಂಆರ್‌ಸಿಎಲ್ ಈ ಮೊದಲು ಅ.21ರವರೆಗೆ ಜನತೆಯಿಂದ ಅಭಿಪ್ರಾಯ ಕೇಳಿತ್ತು. ಈ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ವಿರೋಧಿಸಿದ್ದಾರೆ.
ಇಲ್ಲಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ:
ದರ ಹೆಚ್ಚಳದ ಬಗ್ಗೆ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ffc@bmrc.co.in ಗೆ ಕಳುಹಿಸಬಹುದು. ಇಲ್ಲವೇ ಅಂಚೆ ಮೂಲಕ ಬಿಎಂಆರ್‌ಸಿಎಲ್ ಶುಲ್ಕ ನಿಗದಿ ಸಮಿತಿ ಅಧ್ಯಕ್ಷರಿಗೆ ಕಳುಹಿಸಬಹುದು. ಇಲ್ಲವೇ ವಾಟ್ಸಾಪ್ ಸಂಖ್ಯೆ 94482 91173 ಸಲಹೆ ಕಳುಹಿಸಬಹುದು ಎಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.