ಚೆನ್ನೈ: ಕಾಲಿವುಡ್ ನಟ ಜಯಂ ರವಿ ಹಾಗೂ ಆರತಿ ಅವರ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಜಯಂ ರವಿ ಅವರು ಡಿವೋರ್ಸ್ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
ನಟ ಜಯಂ ರವಿ ಅವರು 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ ಜೊತೆಗಿನ ನನ್ನ ವಿವಾಹ ಸಂಬಂಧಕ್ಕೆ ಡಿವೋರ್ಸ್ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ಸಮಯದಲ್ಲಿ ನಮ್ಮ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಊಹೆಗಳು, ವದಂತಿಗಳು, ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಈ ವಿಷಯವು ಖಾಸಗಿಯಾಗಿ ಉಳಿಯಲಿ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
2009ರಲ್ಲಿ ಜಯಂ ರವಿ ಹಾಗೂ ಆರತಿ ಮದುವೆ ಆಗಿದ್ದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಈ ಜೋಡಿಯು ಡಿವೊರ್ಸ್ ಪಡೆದಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.