ಲಡಾಖ್: ಭಾರತ-ಚೀನಾ ನಡುವೆ ಇತ್ತೀಚೆಗೆ ಆದ ಒಪ್ಪಂದದಂತೆ ಲಡಾಖ್‌ನ ಡೆಮ್ಚೋಖ್ ಹಾಗೂ ಡೆಸ್ಪಾಂಗ್ ಗಡಿಯಲ್ಲಿ ಸೇನಾ ಹಿಂತೆಗೆತ ಬಹುತೇಕ ಪೂರ್ಣವಾಗಿದೆ. ಶೀಘ್ರದಲ್ಲೇ ಭಾರತ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ ಎನ್ನಲಾಗಿದೆ.
ಇತ್ತೀಚೆಗೆ ಎರಡೂ ದೇಶಗಳು ಸೇನಾ ಹಿಂತೆಗೆತಕ್ಕೆ ಒಪ್ಪಂದ ಮಾಡಿಕೊಂಡಿದ್ದವು. ಆ ಪ್ರಕಾರ ಅ.25ರಂದು ಸೇನಾ ಹಿಂತೆಗೆತ ಆರಂಭವಾಗಿತ್ತು ಹಾಗೂ ಚೀನಾ ಸೈನಿಕರು ಟೆಂಟ್ ತೆರವುಗೊಳಿಸಲು ಆರಂಭಿಸಿದ್ದರು. ಅ,28-29ರ ವೇಳೆಗೆ ಹಿಂತೆಗೆತ ಪೂರ್ಣಗೊಳ್ಳಲಿದೆ ಎಂದು ಭಾರತದ ರಕ್ಷಣಾ ಮೂಲಗಳು ಹೇಳಿದ್ದವು.
‘ಆ ಪ್ರಕಾರ ಸೇನಾ ಹಿಂತೆಗೆತ ಬಹುತೇಕ ಮುಕ್ತಾಯವಾಗಿದೆ. ಅಧಿಕೃತ ಘೋಷಣೆ ಯಾವುದೇ ಕ್ಷಣದಲ್ಲಿ ಹೊರಬೀಳಲಿದೆ. ಬಳಿಕ ಒಪ್ಪಂದದಂತೆ ಎರಡೂ ದೇಶಗಳ ಯೋಧರು ಗಡಿಯಲ್ಲಿ ಜಂಟಿ ಪಹರೆ ನಡೆಸಲಿದ್ದಾರೆ’ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.
2020ರಲ್ಲಿ ಲಡಾಖ್‌ನ ಗಲ್ವಾನ್ ಗಡಿಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಬಳಿಕ ಲಡಾಖ್‌ನ 7 ಗಡಿ ಕೇಂದ್ರಗಳಲ್ಲಿ ಉಭಯ ದೇಶಗಳ ಯೋಧರು ಬೀಡು ಬಿಟ್ಟು ಜಟಾಪಟಿ ನಡೆಸಿದ್ದರು. ಆದರೆ ನಂತರದ ಶಾಂತಿ ಮಾತುಕತೆಗಳು ನಡೆದು 5 ಗಡಿಗಳಲ್ಲಿ ಸೇನಾ ಹಿಂತೆಗೆತ ಆಗಿತ್ತು. ಡೆಮ್ಚೋಕ್ ಹಾಗೂ ಡೆಸ್ಪಾಂಗ್‌ನಲ್ಲಿ ಮಾತ್ರ ಆಗಿರಲಿಲ್ಲ. ಅಲ್ಲಿ ಈಗ ಸೇನಾ ಹಿಂತೆಗೆತ ಸಾಕಾರ ಆಗುತ್ತಿದ್ದು, ಗಡಿಯಲ್ಲಿ 5 ವರ್ಷಗಳ ಬಳಿಕ ಶಾಂತಿ ನೆಲೆಸುವ ನಿರೀಕ್ಷೆ ಇದೆ.