ಕೊಪ್ಪಳ: ಸತತ 3ನೇ ಬಾರಿಗೆ ಹೆಣ್ಣು ಮಗುವಾಗಿದ್ದಕ್ಕೆ ಬರೀ ಹೆಣ್ಣನ್ನೇ ಹೆರುವ ನೀನು ಭೂಮಿ ಮೇಲೆ ಇರಬಾರದು. ಸತ್ತು ಹೋಗುವುದು ಲೇಸು ಎಂದು ಗಂಡನ ಮನೆಯವರು ನೀಡಿದ ಕಿರುಕುಳ ಬೇಸತ್ತು ಮಹಿಳೆಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದೆ.
ಚಳ್ಳಾರಿಯ ಹನುಮವ್ವ ಗುಮಗೇರಿ (25) ಮೃತೆ. ಮೃತಳ ತಂದೆ ಬಸಪ್ಪ ಕೋರಿ ನೀಡಿದ ದೂರನ್ನು ಆಧರಿಸಿ ಪತಿ ಗಣೇಶ ಗುಮಗೇರಿ ಹಾಗೂ ಆತನ ತಾಯಿ (ಅತ್ತೆ) ಯಲ್ಲವ್ವ ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪತಿ ಗಣೇಶನನ್ನು ಬಂಧಿಸಲಾಗಿದೆ. ನನ್ನ ಮಗಳಿಗೆ ಗಂಡನ ಮನೆಯಲ್ಲಿ ಬರಿ ಹೆಣ್ಣು ಹೆರುವ ನೀನು ಸಾಯಿ ಎಂದು ಕಿರುಕುಳ ನೀಡಿದ್ದಾರೆ. ಈ ವಿಷಯವನ್ನಿಟ್ಟುಕೊಂಡು ಹಿಂಸೆ ನೀಡುತ್ತಿದ್ದರು. ಇದನ್ನು ಸಹಿಸದೇ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಬರಿ ಹೆಣ್ಣನ್ನೇ ಹೆರುವ ನೀನು ಭೂಮಿ ಮೇಲೆ ಇರಬಾರದು. ಸತ್ತು ಹೋಗುವುದು ಲೇಸು ಎಂದು ಗಂಡ ಪ್ರತಿನಿತ್ಯ ಹೊಡಿಯುತ್ತಿದ್ದ ಕಾರಣ 4 ವರ್ಷ, 3 ವರ್ಷ, 4 ತಿಂಗಳ ಮುದ್ದಾದ ಪುತ್ರಿಯರನ್ನು ಹೊಂದಿರುವ ಹನುಮವ್ವ ಮನೆಯಲ್ಲಿಯೇ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ತಂದೆ ಬಸಪ್ಪ ಕೋರಿ ನೀಡಿದ ದೂರನ್ನು ಆಧರಿಸಿ ಪತಿ ಗಣೇಶ ಗುಮಗೇರಿ ಹಾಗೂ ಆತನ ತಾಯಿ (ಅತ್ತೆ) ಯಲ್ಲವ್ವ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪತಿ ಗಣೇಶನನ್ನು ಬಂಧಿಸಲಾಗಿದೆ.
ಹೆಣ್ಣು ಹೆತ್ತಿದ್ದಕ್ಕೆ ನಿಂದನೆ:
ಹೆಣ್ಣು ಹೆರುವ ನೀನು ಸಾಯಿ ಎಂದು ಕಿರುಕುಳ ನೀಡಿದ್ದಾರೆ. ಇದೇ ವಿಷಯಕ್ಕೆ ಪ್ರತಿ ಬಾರಿ ಜಗಳವಾಡುತ್ತಿದ್ದರು. ಆಕೆ ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೇ ಆಕೆಯ ಜೀವಕ್ಕೆ ಕುತ್ತಾಯಿತು. ಇಡೀ ಮನೆಯವರು ಸಹ ಈ ಬಗ್ಗೆ ಆಕ್ಷೇಪಿಸುತ್ತಿದ್ದರು. ಈ ವಿಷಯವನ್ನು ಮುಂದೆ ಮಾಡಿ ಹಿಂಸೆ ನೀಡುತ್ತಿದ್ದರು. ಇದನ್ನು ಸಹಿಸದೇ ಆಕೆ ನೇಣುಬಿಗಿದುಕೊಂಡು, ನಾಲ್ಕು ತಿಂಗಳ ಮಗು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾಳೆ ಎಂದರೆ ಆಕೆ ಎಂಥ ಹಿಂಸೆಯನ್ನು ಅನುಭವಿಸಿರಬೇಕು ಎಂದು ಮೃತಳ ತಂದೆ ಬಸಪ್ಪ ನೀಡಿರುವ ಅಳಲು ತೋಡಿಕೊಂಡಿದ್ದಾರೆ.
ಕುಡಿತದ ದಾಸನಾಗಿದ್ದ ಗಂಡ:
ಹೆಣ್ಣು ಮಗುವಾಗಿದ್ದರಿಂದ ಪತಿ ಗಣೇಶ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದನಂತೆ. ಆಗಿನಿಂದಲೇ ಕುಡಿತದ ದಾಸನಾಗಿದ್ದ. ನನಗೆ ಬರಿ ಹೆಣ್ಣು ಹೆರುವ ಪತ್ನಿ ಸಿಕ್ಕಿದ್ದಾಳೆ ಎನ್ನುತ್ತಿದ್ದ. ಮೂರನೇ ಮಗು ಸಹ ಹೆಣ್ಣಾಗಿದ್ದರಿಂದ ಪತ್ನಿಗೆ ವಿಪರೀತ ಹಿಂಸೆ ನೀಡಿದ್ದಾನೆ. ಬರಿ ಹೆಣ್ಣು ಹೆರುವ ನೀನು ಸಾಯುವುದೇ ಲೇಸು ಎಂದಿದ್ದಾನೆ. ಗಂಡುಮಗುವಿಗೆ ಜನ್ಮ ನೀಡದ ನೀನ್ಯಾಕೆ ನನಗೆ ಜೊತೆಯಾದೆ ಎಂದೆಲ್ಲ ಹಿಂಸಿಸಿದ್ದಾನೆ ಎನ್ನಲಾಗಿದೆ. ಹೀಗಾಗಿಯೇ ಆಕೆ ನಾಲ್ಕು ತಿಂಗಳ ಮಗು ಮನೆಯಲ್ಲಿದ್ದರೂ ಸಹ ಅದಕ್ಕೆ ಹಾಲುಣಿಸಿ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಸೋಮವಾರ ಮಧ್ಯಾಹ್ನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.