ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದೀಪಾವಳಿ ಹಬ್ಬದ ಮಾರುಕಟ್ಟೆ ಕಳೆಗಟ್ಟಿದ್ದು, ಮಾರುಕಟ್ಟೆಯಲ್ಲಿ ಜನತೆ ಕಿಕ್ಕಿರಿದು ಭರ್ಜರಿ ಖರೀದಿಯಲ್ಲಿ ತೊಡಗಿದ್ದಾರೆ. ಹಬ್ಬಕ್ಕೆ ಎರಡು ದಿನ ಇರುವಂತೆ ಮಂಗಳವಾರ ಧನ ತ್ರಯೋದಷಿ (ಧನ್‌ತೇರಾಸ್) ಪ್ರಯುಕ್ತ ನಗರದ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರು ತುಂಬಿದ್ದರು.
ದೀಪಾವಳಿಗಾಗಿ ಚಿನ್ನಾಭರಣ, ಜವಳಿ ಜೊತೆಗೆ ವಾಹನ, ಗೃಹೋಪಯೋಗಿ ಪರಿಕರಗಳ ಖರೀದಿ ಜೋರಾಗಿದೆ. ಈಗಾಗಲೇ ಹಲವರು ಹಬ್ಬದ ದಿನ ಲಕ್ಷ್ಮೀ ಸ್ವರೂಪದಲ್ಲಿ ಮನೆಗೆ ಕೊಂಡೊಯ್ಯಲು ಚಿನ್ನ ಸೇರಿ ಇತರೆ ವಸ್ತುಗಳನ್ನು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ವರ್ತಕರು ಕೂಡ ಭರ್ಜರಿ ರಿಯಾಯಿತಿ ಸೇರಿ ಮತ್ತಿತರ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ನಗರದ ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ, ಜಯನಗರ, ಗಾಂಧೀಬಝಾರ್, ಯಶವಂತಪುರ, ಮಡಿವಾಳ ಸೇರಿ ನಾನಾ ಪ್ರದೇಶಗಳ ಮಾರುಕಟ್ಟೆಗಳಲ್ಲಿ ಹಬ್ಬದ ವಹಿವಾಟು ಜೋರಾಗಿದೆ. ನಗರಕ್ಕೆ ಹೊಸೂರು ಭಾಗದಿಂದ ಹೆಚ್ಚಾಗಿ ಪಟಾಕಿಯನ್ನು ತರುತ್ತಿದ್ದಾರೆ. ಮಾಲ್‌ಗಳು ಸೇರಿ ಹಲವು ಮಳಿಗೆಗಳಲ್ಲಿ ದೀಪಾವಳಿಯ ವಿಶೇಷ ಅಲಂಕಾರ ಮಾಡಲಾಗಿದೆ. ದೀಪಾವಳಿ ದಿನದ ಲಕ್ಷ್ಮೀ ಪೂಜೆಗಾಗಿ ಸಿದ್ಧತೆ ಮಾಡಿಕೊಂಡಿವೆ.
ದೀಪಾವಳಿ ಪ್ರಯುಕ್ತ ನಗರದ ಮಾರುಕಟ್ಟೆ ಸೇರಿ ಇತರೆಡೆ ಹಲವು ಬಗೆಯ ವಿನ್ಯಾಸದ ಹಣತೆಗಳ ಮಾರಾಟ ಜೋರಾಗಿದೆ. ₹10 ರಿಂದ ಹಿಡಿದು ₹500ಗೂ ಹೆಚ್ಚಿನ ಬೆಲೆಯುಳ್ಳ ದೀಪಗಳು ಮಾರಾಟ ಆಗುತ್ತಿವೆ. ಜೊತೆಗೆ ಸಿಹಿತಿನಿಸು, ಖಾದ್ಯಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸೋನ್ ಪಾಪಡ್, ಲಡ್ಡು, ಬಾದ್‌ಶಾ, ಜಿಲೇಬಿ, ಮೈಸೂರು ಪಾಕ್ ಸೇರಿ ಸಿಹಿತಿಂಡಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ನಗರದ ಕೇಟರಿಂಗ್, ಹೋಟೆಲ್‌ಗಳು, ಸಿಹಿಖಾದ್ಯಗಳ ತಯಾರಿಕೆಯಲ್ಲಿ ತೊಡಗಿವೆ.
ದರ ಹೆಚ್ಚಾದರೂ ತಗ್ಗದ ಚಿನ್ನ ಖರೀದಿ:
ಐತಿಹಾಸಿಕ ಎನ್ನುವ ಮಟ್ಟದಲ್ಲಿ ಚಿನ್ನದ ದರ ಏರಿಕೆಯಾಗಿದೆ. ಮಂಗಳವಾರದ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹7375 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ₹7890 ಇತ್ತು. ಮಂಗಳವಾರ ಹಾಗೂ ಬುಧವಾ ಧನ್‌ಥೇರಾಸ್ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಬಿ. ರಾಮಾಚಾರ್ಯ, ಹಬ್ಬದ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಗ್ರಾಹಕರು ಖರೀದಿ ಮಾಡುವ ಚಿನ್ನದ ಪ್ರಮಾಣ ಕಡಿಮೆ ಆಗಿರಬಹುದು. ಆದರೆ, ಚಿನ್ನ ಖರೀದಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಹೆಚ್ಚಾಗಿದೆ. ದೀಪಾವಳಿಗಾಗಿ ಚಿನ್ನದ ಹಾಗೂ ಬೆಳ್ಳಿಯ ಲಕ್ಷ್ಮೀ ಕಾಯಿನ್ ಹೆಚ್ಚಾಗಿ ಖರೀದಿ ಆಗುತ್ತಿದೆ ಎಂದು ತಿಳಿಸಿದರು.




