ಬೆಂಗಳೂರು: ಸೈಬರ್ ವಂಚಕರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರ ಹೆಸರಿನಲ್ಲಿ ಡೀಪ್ ಫೇಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಷೇರು ಹೂಡಿಕೆ ನೆಪದಲ್ಲಿ ಅಧಿಕ ಲಾಭದ ಆಸೆ ತೋರಿಸಿ ಮಹಿಳೆಯೊಬ್ಬರಿಂದ ಬರೋಬ್ಬರಿ ₹67.11 ಲಕ್ಷ ವರ್ಗಾಯಿಸಿಕೊಂಡು ಬಳಿಕ ವಂಚಿಸಿರುವ ಘಟನೆ ನಡೆದಿದೆ.
ಬನಶಂಕರಿ ಎರಡನೇ ಹಂತದ ಕೆ.ಜಿ.ವೀಣಾ ಅವರು ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ?:
ಇತ್ತೀಚೆಗೆ ಸೈಬರ್ ವಂಚಕರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರು ‘ಎಫ್‌ಎಕ್ಸ್ ರೋಡ್ ಪ್ಲಾಟ್‌ಫಾರ್ಮ್ ಟ್ರೇಡಿಂಗ್’ ಬಗ್ಗೆ ಮಾಹಿತಿ ನೀಡಿರುವಂತೆ ಡೀಪ್ ಫೇಕ್ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಹಾಕಿದ್ದಾರೆ. ಬಳಿಕ ‘ಇನ್ಫೋ ಅಟ್ ಎಫ್‌ಎಕ್ಸ್‌ರೋಡ್ ಡಾಟ್ ಕಾಮ್’ ಎಂಬ ಇ-ಮೇಲ್ ಐಡಿಯಿಂದ ದೂರುದಾರೆ ವೀಣಾ ಅವರ ಇ-ಮೇಲ್ ಐಡಿಗೆ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂಬ ಸಂದೇಶ ಕಳುಹಿಸಿದ್ದಾರೆ.
ಇದನ್ನು ನಂಬಿದ ವೀಣಾ ಅವರು ತಮ್ಮ ಕ್ರೆಡಿಟ್ ಕಾರ್ಡ್‌ನಿಂದ ₹1.39 ಲಕ್ಷ ವರ್ಗಾಯಿಸಿ ಹೂಡಿಕೆ ಮಾಡಿದ್ದಾರೆ. ಬಳಿಕ ಸೈಬರ್ ವಂಚಕರು ₹8,363 ವನ್ನು ಲಾಭದ ರೂಪದಲ್ಲಿ ವಾಪಸ್ ನೀಡಿದ್ದಾರೆ. ಬಳಿಕ ವೀಣಾ ಅವರು ವಿವಿಧ ಹಂತಗಳಲ್ಲಿ ₹6.71 ಲಕ್ಷ ಹೂಡಿಕೆ ಮಾಡಿದ್ದಾರೆ. ನಂತರ ವಂಚಕರು ಯಾವುದೇ ಲಾಭಾಂಶ ನೀಡಿಲ್ಲ.
ಈ ನಡುವೆ ವೀಣಾ ಅವರು ಇನ್ಸ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ವರ್ಕ್ ಫ್ರಮ್ ಹೋಂ ಜಾಹೀರಾತು ನೋಡಿದ್ದಾರೆ. ಬಳಿಕ ಜಾಹೀರಾತಿನಲ್ಲಿ ನೀಡಲಾಗಿದ್ದ ಲಿಂಕ್‌ವೊಂದನ್ನು ಕ್ಲಿಕ್ ಮಾಡಿದ್ದಾರೆ. ಟೆಲಿಗ್ರಾಮ್ ಆ್ಯಪ್ ಮುಖಾಂತರ ವೀಣಾ ಅವರನ್ನು ಸಂಪರ್ಕಿಸಿರುವ ವಂಚಕರು, ‘ಎಎಸ್‌ಒಎಸ್ ಪ್ಲಾಟ್‌ಫಾರ್ಮ್’ನಲ್ಲಿ ಪ್ರಾಡಕ್ಟ್‌ಗಳಿಗೆ ರೇಟಿಂಗ್ ನೀಡುವ ಮುಖಾಂತರ ಹಣ ಗಳಿಸಬಹುದು ಎಂದು ತಿಳಿಸಿದ್ದಾರೆ. ಬಳಿಕ ವೀಣಾ ಅವರನ್ನು ಸಂಪರ್ಕಿಸಿರುವ ವಂಚಕರು, ಪ್ರಾಡಕ್ಟ್ ರೇಟಿಂಗ್ ಟಾಸ್ಕ್ ನೀಡಿ ₹779 ನಂತೆ ಎರಡು ಬಾರಿ ಹಣವನ್ನೂ ಹಾಕಿದ್ದಾರೆ.