ನವದೆಹಲಿ: ‘ವಿಕಿಪೀಡಿಯಾ’ದ ತಾರತಮ್ಯ ನೀತಿ ಅನುಸರಿಸುತ್ತದೆ ಎಂದು ಪ್ರಶ್ನೆ ಮಾಡಿರುವ ಕೇಂದ್ರ ಸರ್ಕಾರ, ‘ನಿಮ್ಮನ್ನು ಮಾಹಿತಿ ಹಂಚಿಕೊಳ್ಳಲು ಇರುವ ವೇದಿಕೆ ಎಂಬುದರ ಬದಲಾಗಿ ಮುದ್ರಕ ಎಂದೇಕೆ ಪರಿಗಣಿಸಬಾರದು ಎಂಬುದಕ್ಕೆ ಉತ್ತರಿಸಿ‘ ಎಂದು ಚಾಟಿ ಬೀಸಿದೆ.
ಹೌದು, ಉಚಿತ ಆನ್‌ಲೈನ್ ವಿಶ್ವಕೋಶ ಎಂದು ಗುರುತಿಸಿಕೊಂಡಿರುವ ‘ವಿಕಿಪೀಡಿಯಾ’ಕ್ಕೆ ಪತ್ರ ಬರೆದಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ‘ವಿಕಿಪೀಡಿಯಾ ತಾರತಮ್ಯ ನಿಲವು ಮತ್ತು ತಪ್ಪು ಮಾಹಿತಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಸಾಕಷ್ಟು ದೂರು ಬರುತ್ತಿದೆ. ಒಂದೆಡೆ ನಿಮ್ಮನ್ನು ನೀವು ಉಚಿತ ಆನ್‌ಲೈನ್ ವಿಶ್ವಕೋಶ ಎಂದು ಹೇಳಿಕೊಳ್ಳುತ್ತೀರಿ. ಆದರೆ ಕೆಲವೇ ಕೆಲವು ಜನರು ವಿಕಿಪೀಡಿಯಾದ ಸಂಪಾದಕೀಯ ನಿಯಂತ್ರಣ ಹೊಂದಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿದೆ. ಹೀಗಾಗಿ ನಿಮ್ಮನ್ನು ವೇದಿಕೆ ಎಂಬುದರ ಬದಲಾಗಿ ಮುದ್ರಕ ಎಂದೇಕೆ ಪರಿಗಣಿಸಬಾರದು’ ಎಂದು ಪ್ರಶ್ನೆ ಮಾಡಿದೆ.
‘ವಿಕಿಪೀಡಿಯಾ ಪುಟಗಳಿಗೆ ಯಾರು ಬೇಕಾದರೂ, ಏನು ಬೇಕಾದರೂ ಮಾಹಿತಿ ಸೇರಿಸಬಹುದು. ಅದನ್ನು ಮಾರ್ಪಡಿಸಬಹುದು. ಹೀಗಾಗಿ ಅದರಲ್ಲಿ ಸಾಕಷ್ಟು ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿ ಹಾಗು ದುರುದ್ದೇಶದ ಮಾಹಿತಿಗಳು ಸೇರ್ಪಡೆಯಾಗಿ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ’ ಎಂಬ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.