ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ವಿರಾಜಮಾನನಾಗಿರುವ ಬಾಲರಾಮ ನೂತನ ಮಂದಿರದಲ್ಲಿ ಮೊದಲ ದೀಪಾವಳಿ ಆಚರಿಸಲು ಸಕಲ ಸಿದ್ಧತೆಯಾಗಿದೆ.
ಶತಮಾನಗಳಿಂದ ಟೆಂಟಿನಲ್ಲಿ ಆಸೀನನಾಗಿದ್ದ ಬಾಲರಾಮ (ರಾಮಲಲ್ಲಾ) ಇದೇ ಮೊದಲ ಬಾರಿಗೆ ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ದೀಪಾವಳಿ ಕಣ್ತುಂಬಿಕೊಳ್ಳಲಿದ್ದಾನೆ.
ಈ ಹಿನ್ನೆಲೆಯಲ್ಲಿ ಇಡೀ ಆಯೋಧ್ಯೆಯನ್ನು ಬಣ್ಣದ ದೀಪಗಳು, ಹಣತೆ, ಹೂವಿನಿಂದ ಶೃಂಗರಿಸಲಾಗಿದೆ. ಜೊತೆಗೆ ಅ.30ರ ಬುಧವಾರ 28 ಲಕ್ಷ ಮಣ್ಣಿನ ದೀಪಗಳನ್ನು ಬೆಳಗುವ ಮೂಲಕ ಇಡೀ ನಗರವನ್ನು ಪ್ರಕಾಶಿಸುವಂತೆ ಮಾಡಿ ವಿಶ್ವ ದಾಖಲೆ ನಿರ್ಮಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.
ಇದರ ಜೊತೆಗೆ ಬುಧವಾರದಿಂದ ಅಯೋಧ್ಯೆಯಲ್ಲಿ ಕಣ್ಮನ ತುಂಬುವ ಲೇಸರ್ ಶೋ, ಡ್ರೋನ್ ಪ್ರದರ್ಶನ ಕೂಡಾ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಮ್ಯಾನ್ಮಾರ್, ನೇಪಾಳ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ ಮತ್ತು ಇಂಡೋನೇಷಿಯಾ ಕಲಾವಿದರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ನಡುವೆ ‘500 ವರ್ಷಗಳ ಕಾಯುವಿಕೆ ಬಳಿಕ ಅಯೋಧ್ಯೆ ಐತಿಹಾಸಿಕ ದೀಪಾವಳಿಯನ್ನು ಆಚರಿಸಲಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಈ ವರ್ಷ ಸಾವಿರಾರು ದೀಪಗಳು ಬೆಳಗಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.