ಕಲಬುರಗಿ: ಮೃತ ಇಂಜಿನಿಯರ್ (Engineer Death) ಒಬ್ಬರನ್ನು ವರ್ಗಾವಣೆ (Transfer) ಮಾಡಿ ನಗರಾಭಿವೃದ್ಧಿ ಇಲಾಖೆ (Urban Development department) ಹಾಸ್ಯಾಸ್ಪದ ಎಡವಟ್ಟು (Viral news) ಮಾಡಿಕೊಂಡಿದೆ. ನಗರಾಭಿವೃದ್ಧಿ ಇಲಾಖೆಯ ಕಿರಿಯ ಎಂಜಿನಿಯರ್ ಅಶೋಕ ಪುಟಪಾಕ್ ಎಂಬವರನ್ನು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಟ್ರಾನ್ಸ್‌ಫರ್ ಮಾಡಿದೆ. ವಾಸ್ತವವಾಗಿ, ಅವರು ಜನವರಿಯಲ್ಲೇ ಮೃತಪಟ್ಟಿದ್ದಾರೆ.
ಇದೀಗ ಜನವರಿಯಲ್ಲೇ ಮೃತಪಟ್ಟ ಇಂಜಿನಿಯರ್‌ನನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಿ ಜುಲೈ 9ರಂದು ಆದೇಶ ಹೊರಡಿಸಲಾಗಿದೆ. ಜನವರಿ 12ರಂದು ಅಶೋಕ ಪುಟಪಾಕ್ ಮೃತಪಟ್ಟಿದ್ದರು. ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಎಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆರ್ಡರ್ ಹೊರಡಿಸಲಾಗಿದೆ.
ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರೂ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇಲ್ಲ ಎಂಬುದು ಹಾಸ್ಯಾಸ್ಪದ ಎನಿಸಿಕೊಂಡಿದೆ. ಹಾಗಿದ್ದರೆ ಈ ಆರು ತಿಂಗಳು ಸಂಬಳವೂ ಅವರ ಖಾತೆಗೆ ಜಮೆ ಆಗುತ್ತಿತ್ತೇ? ಈ ಪ್ರಶ್ನೆಗೆ ಇಲಾಖೆ ಇನ್ನೂ ಉತ್ತರಿಸಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಸಂಭವಿಸಿರುವ ಈ ಎಡವಟ್ಟು ಇಲಾಖೆಗೂ ಸಚಿವರಿಗೂ ಇದೀಗ ಮುಜುಗರ ಸೃಷ್ಟಿಸಿದೆ.