ಧಾರವಾಡ: ಕಾಂಗ್ರೆಸ್ ಮಹಾನ್ ಕಳ್ಳರು, ಖದೀಮರ ಪಕ್ಷವಾಗಿದ್ದು, ಇಡೀ ದೇಶದಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದೆ. ಅಲ್ಲದೆ, ರಾಜ್ಯವನ್ನು ದಿವಾಳಿ ಪ್ರಯತ್ನ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಮಲ್ಲಿಕಾರ್ಜುನ ಅಧ್ಯಕ್ಷ ಖರ್ಗೆ ಅವರ ಹೇಳಿಕೆಯ ಶೈಲಿ ನೋಡಿದರೆ ಮಹಾರಾಷ್ಟ್ರ ಹಾಗೂ ಜಾರ್ಖಾಂಡ್ ಚುನಾವಣೆಯವರೆಗೂ ಸುಮ್ಮನಿರಿ ಅಂದ ಹಾಗೇ ಇದೆ. ಬಳಿಕ ಗ್ಯಾರಂಟಿ ಯೋಜನೆಗಳನ್ನು ತೆಗೆದು ಹಾಕಿ ಎಂಬ ಮಾನಸಿಕತೆಯಲ್ಲಿ ಅವರಿದ್ದಾರೆ. ಐದು ಗ್ಯಾರಂಟಿಗಳನ್ನು ಎಲ್ಲಿ ಪೂರೈಸಿದ್ದಾರೆ. ಯುವನಿಧಿ ಯೋಜನೆ 2023-24ರಲ್ಲಿ ಪದವಿ ಮುಗಿಸಿದ ಯಾವ ಯುವಕರಿಗೂ ನೀಡಿಲ್ಲ. ಕಾಂಗ್ರೆಸ್ ಎಂಥ ಖದೀಮರು ಅಂದರೆ ನಾವು ನೀಡುತ್ತಿದ್ದ 5 ಕೆಜಿ ಅಕ್ಕಿಯನ್ನು ತಾವೇ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂತಹ ಕಳ್ಳರನ್ನು ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸುಳ್ಳು ಆಶ್ವಾಸನೆಗೆ ಕಿವಿಗೊಡದ ಜಮ್ಮು-ಕಾಶ್ಮೀರ ಹಾಗೂ ಹರಿಯಾಣ ಜನರು ಅವರನ್ನು ಕಡೆಗಣಿಸಿದ್ದು, ಅದೇ ರೀತಿ ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲೂ ಕಿತ್ತೆಸೆಯುತ್ತಾರೆ. ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಅನ್ನು ಅನೇಕ ರಾಜ್ಯದಲ್ಲಿ ತೆಗೆದು ಹಾಕಿದೆ. ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯವಾಗಿದೆ ಎಂದು ಲೆವಡಿ ಮಾಡಿದರು.
ಅಕ್ಕಿ ಖರೀದಿಸಲು ದುಡ್ಡಿಲ್ಲ:
ಕಾಂಗ್ರೆಸ್‌ನವರು ಮಹಾ ಕಳ್ಳರು, ಖದೀಮರಿದ್ದಾರೆ. ನಾವು (ಕೇಂದ್ರ ಸರ್ಕಾರ) 5 ಕೆ.ಜಿ. ಅಕ್ಕಿ ಕೊಡ್ತಾ ಇದ್ದೇವೆ. ಆದರೆ, ಇವರು ಅನ್ನಭಾಗ್ಯ ಅಂತ ಬರೆದುಕೊಳ್ಳುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದಂತಹ ಕಳ್ಳರು ಜಗತ್ತಿನಲ್ಲಿ ಬುತ್ತಿ ಕಟ್ಟಿಕೊಂಡು ಹುಡುಕಾಡಿದರೂ ಸಿಗುವುದಿಲ್ಲ. ಆಹಾರ ಸಚಿವ ಮುನಿಯಪ್ಪ ಅವರು ಭೇಟಿ ಆದಾಗ ಇನ್ನು 5 ಕೆ.ಜಿ. ಅಕ್ಕಿ ಕೊಡ್ತೇವೆ, ₹32 ಇದ್ದ ಅಕ್ಕಿಯನ್ನು 28 ರು.ಗೆ ಕೊಡುತ್ತೇವೆ ಅಂದಿದ್ದೆವು. ಅಲ್ಲದೆ, ಹಣ ಈಗಲೇ ಬೇಡ ಉದ್ರಿ ಕೊಡ್ತೇವೆ ಅಂತ ಅಂದ್ರು ತೆಗೆದುಕೊಳ್ಳೋಕೆ ಇವರತ್ರ (ರಾಜ್ಯ ಸರ್ಕಾರ) ದುಡ್ಡಿಲ್ಲ ಎಂದು ಜೋಶಿ ಆರೋಪಿಸಿದ್ದಾರೆ.