ಕುಂದಾಪುರ: ಮನೆಯಲ್ಲಿ ಗಾಂಜಾ ದಾಸ್ತಾನು ಇರಿಸಿದ್ದ ಆರೋಪದ ಮೇಲೆ ಕುಂದಾಪುರ ಪೊಲೀಸರು ದಾಳಿ ನಡೆಸಿ ಮಹಿಳೆ ಸೇರಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಕುಂದಾಪುರದಲ್ಲಿ ನಡೆದಿದೆ. ತಾಲ್ಲೂಕಿನ ಗುಲ್ವಾಡಿಯ ಉದಯ ನಗರ ನಿವಾಸಿಗಳಾದ ನಜರುಲ್ಲಾ ಖಾನ್(40) ಮತ್ತು ಫಾತಿಮಾ(33) ಬಂಧಿತ ಅರೋಪಿಗಳಾಗಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ಗಾಂಜಾ ದಾಸ್ತಾನು ಇರಿಸಿರುವ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮನೆಯಲ್ಲಿ ದಾಸ್ತಾನು ಇರಿಸಿದ್ದ 6.43 ಲಕ್ಷ ಮೌಲ್ಯದ ಸುಮಾರು 8 ಕೆಜಿ, 374 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಮನೆಯಲ್ಲಿ ಅಕ್ರಮವಾಗಿ ಗಾಂಜಾ ದಾಸ್ತಾನು ಇರಿಸಿಕೊಂಡಿದ್ದರು ಎನ್ನಲಾಗಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಗಾಂಜಾ ಮೂಲವನ್ನು ಪತ್ತೆ ಹಚ್ಚಲು ತನಿಖೆ ಮುಂದುವರೆಸಿದ್ದು ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.