ಬೆಂಗಳೂರು: ಕಾಲೇಜಿನ ಕ್ಲಾಸ್ ರೂಮ್ ಒಳಗಡೆಯೇ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಧಾನಿಯ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೃತ್ತಿ ವಿಚಾರವಾಗಿ ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಾಂಶುಪಾಲ ಮತ್ತು ಸಹೋದ್ಯೋಗಿಗಳ ವಿರುದ್ಧ ಆರೋಪಿಸಿ ಖಾಸಗಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯೊಬ್ಬರು ಬೋಧನಾ ತರಗತಿಯಲ್ಲಿಯೇ ಸೋಮವಾರ ಮಾತ್ರೆ ಸೇವಿಸಿ ಸಾವಿಗೆ ಶರಣಾಗಲು ಮುಂದಾಗಿದ್ದರು.
ಜಯನಗರದ ಖಾಸಗಿ ಕಾಲೇಜಿನ ಪ್ರಾಧ್ಯಾಪಕಿ ಶಬಾನಾ ಆತ್ಮಹತ್ಯೆ ಯತ್ನಿಸಿದವರು. ಕಳೆದ 3 ತಿಂಗಳಿಂದ ನನ್ನ ಏಳಿಗೆ ಸಹಿಸಲಾರದೆ ಪ್ರಾಂಶುಪಾಲೆ ಗೀತಾ ರೆಡ್ಡಿ ಹಾಗೂ ಸಹೋದ್ಯೋಗಿಗಳಾದ ಸ್ಮಿತಾ ಮತ್ತು ಅವಿನಾಶ್ ಕಿರುಕುಳ ಕೊಡುತ್ತಿದ್ದರು. ನನಗೆ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಬಂದಿದ್ದಕ್ಕೆ ಸಹಿಸಲಾಗದೆ ಈ ರೀತಿ ತೊಂದರೆ ಮಾಡುತ್ತಿದ್ದರು ಎಂದು ಶಬಾನಾ ಆರೋಪಿಸಿದ್ದಾರೆ.
ಪ್ರಾಣಾಪಾಯದಿಂದ ಪಾರು:
ಕಾಲೇಜಿನ ಬೋಧನಾ ತರಗತಿಯಲ್ಲಿ ಬೆಳಗ್ಗೆ 10.45ರ ಸುಮಾರಿಗೆ ಮಾತ್ರೆ ಸೇವಿಸಿ ಶಬಾನಾ ಆತ್ಮಹತ್ಯೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ದಾಖಲಿಸಿದ್ದಾರೆ. ಚಿಕಿತ್ಸೆಗೆ ಶಬಾನಾರವರು ಸ್ಪಂದಿಸಿದ್ದು, ಪ್ರಾಣಪಾಯದಿಂದ ಪರಾಗಿದ್ದಾರೆ. ಈ ಆತ್ಮಹತ್ಯೆ ಯತ್ನದ ಬಗ್ಗೆ ತಿಲಕನಗರ ಪೊಲೀಸರಿಗೆ ಆಸ್ಪತ್ರೆಯಿಂದ ಮಾಹಿತಿ ಬಂದ ಮೇರೆಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ.
ಎರಡು ವರ್ಷದಿಂದ ಕೆಲಸ:
ಜಯನಗರದ 9ನೇ ಹಂತದಲ್ಲಿ ನೆಲೆಸಿರುವ ಶಬಾನಾ ಅವರು, ಎರಡೂವರೆ ವರ್ಷದಿಂದ ಜಯನಗರದ ಖಾಸಗಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸುತ್ತ ಆ ಕಾಲೇಜಿನಲ್ಲಿ ಅವರು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ವೃತ್ತಿ ಸಂಬಂಧಿಸಿದಂತೆ ಪ್ರಾಂಶುಪಾಲರು ಹಾಗೂ ಸಹೋದ್ಯೋಗಿಗಳ ನಡುವೆ ಶಬಾನಾ ಮನಸ್ತಾಪವಾಗಿತ್ತು. ಇದೇ ಕಾರಣಕ್ಕೆ ಆಗಾಗ್ಗೆ ಜಗಳಗಳು ನಡೆದಿದ್ದವು. ಅಂತೆಯೇ ತಮ್ಮ ಚೇಂಬರ್‌ಗೆ ಕರೆಸಿ ಶಬಾನಾ ಅವರಿಗೆ ಪ್ರಾಂಶುಪಾಲೆ ಗೀತಾ ರೆಡ್ಡಿ ಬೈದಿದ್ದರು ಎನ್ನಲಾಗಿದೆ. ಈ ಘಟನೆ ಬಳಿಕ ಮನನೊಂದು ಶಬಾನಾ, ತರಗತಿ ಕೊಠಡಿಗೆ ತೆರಳಿ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.