ಕಂದಾಯ ಕಾನೂನು ಮೀರಿದ ರಾಜ್ಯ ಸರ್ಕಾರ, ಕೂಡಲೇ ವಕ್ಫ್‌ ನೋಟಿಸ್ ಹಿಂಪಡೆಯಿರಿ: ಸಿಎಂಗೆ ಬೊಮ್ಮಾಯಿ ಆಗ್ರಹ

ಶಿಗ್ಗಾಂವಿ: ರಾಜ್ಯದಲ್ಲಿ ವಕ್ಫ್‌ ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ ಕಾನೂನು ಕಡೆಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಫ್‌ ಪ್ರಾಪರ್ಟಿ ಎಂದು ಮಾಡಲು ಹೊರಟಿದ್ದಾರೆ. ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ವಾಪಸ್…

basavaraj-bommai-vijayaprabha

ಶಿಗ್ಗಾಂವಿ: ರಾಜ್ಯದಲ್ಲಿ ವಕ್ಫ್‌ ಕಾನೂನು ದುರುಪಯೋಗ ಆಗುತ್ತಿದ್ದು, ಕಂದಾಯ ಕಾನೂನು ಕಡೆಗಣಿಸಿ ವಿನಾಕಾರಣ ಇಡೀ ರಾಜ್ಯದ ರೈತರ ಸಾಗುವಳಿ ಜಮೀನುಗಳಿಗೆ ವಕ್ಫ್‌ ಪ್ರಾಪರ್ಟಿ ಎಂದು ಮಾಡಲು ಹೊರಟಿದ್ದಾರೆ. ಸರ್ಕಾರ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು, ರಾಜ್ಯದ ಸಮಗ್ರ ದಾಖಲೆಗಳನ್ನು ಪರಿಶೀಲನೆ ಮಾಡಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಕ್ಫ್ ಕಾನೂನು ದುರುಪಯೋಗ ಆಗುತ್ತಿದೆ. ಕಂದಾಯ ಕಾನೂನು ಕಡೆಗಣಿಸಿದ್ದಾರೆ. ಭೂಮಿ ವಿಚಾರದಲ್ಲಿ ಕಂದಾಯ ಕಾನೂನು ದಾಖಲೆಗಳೇ ಅಂತಿಮ. ಆದರೆ, ಆ ಕಾನೂನು ಕಡೆಗಣಿಸಿ ಅದಾಲತ್ ಪ್ರಕಾರ ಆಗಿದ್ದೇ ಅಂತಿಮ ಅಂತ ಮಾಡುತ್ತಿದ್ದಾರೆ. ಹಿಂದೆ ಇಂಥ ಪ್ರಕರಣ ಆದಾಗ ಯಾರ್ಯಾರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರಿಗೆಲ್ಲ ನ್ಯಾಯ ಸಿಕ್ಕಿದೆ. ಯಾರೋ ಒಬ್ಬರು ಅರ್ಜಿ ಹಾಕಿದರೆ ಇಡೀ ರಾಜ್ಯದ ರೈತರ ಆಸ್ತಿಗೆ ವಕ್ಫ್‌ ಆಸ್ತಿಯೆಂದು ರೈತರಿಗೆ ನೋಟಿಸ್ ನೀಡುವ ಮೂಲಕ ಸರ್ಕಾರದಿಂದ ಅರಾಜಕತೆ, ಗಾಬರಿ ಉಂಟು ಮಾಡುವ ಕೆಲಸ ನಡೆದಿದೆ. ಇದೊಂದು ಬೇಜವಾಬ್ದಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಗೆಜೆಟ್ ನೋಟಿಫಿಕೇಶನ್ ಆದ ಬಳಿಕ ತರಾತುರಿಯಲ್ಲಿ ಡಿಸಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಜಿಲ್ಲಾಧಿಕಾರಿಗೆ ಅಷ್ಟಾದರೂ ಜ್ಞಾನ ಇರಬೇಕಲ್ಲವೇ? ಮೊದಲು ಇದರ ಬಗ್ಗೆ ಸಮಗ್ರವಾಗಿ ಪರಿಶೀಲನೆ ಆಗಬೇಕು. ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದ ಗಲಾಟೆಗೆ ಸರ್ಕಾರವೇ ನೇರ ಕಾರಣ. ಜನರ ಮೇಲೆ‌ ಕಾನೂನು ಹೇರುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಜೀವನ ನಡೆಸುತ್ತಾರೆ. ಸೌಹಾರ್ದತೆ ಕಲಕುವ ಕೆಲಸ ನಡೆದಿದೆ. ಈ ಸರ್ಕಾರ ಬಂದಾಗಿನಿಂದ ತುಷ್ಟೀಕರಣ ನಡೆದಿದೆ. ಮುಖ್ಯಮಂತ್ರಿಗಳು ರೈತರಿಗೆ ನೀಡಿರುವ ನೋಟಿಸ್‌ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ, ಇನ್ನೂ ವಾಪಸ್ ಪಡೆಯುವ ಕೆಲಸ ಆಗಿಲ್ಲ. ಸಿಎಂ ನೇರವಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.

Vijayaprabha Mobile App free

ಈಗ ಒಂದು ಕಡೆ ಎಲ್ಲಿಯಾದರೂ ಪೂಜೆ ಮಾಡಿ ನಮ್ಮದೇ ಭೂಮಿ ಅಂದರೆ ಹೇಗೆ? ಇಲ್ಲಿಯ ಕೃಷ್ಣಾನಗರ ತಾಂಡಾ ವಕ್ಫ್‌ ಪ್ರಾಪರ್ಟಿ ಅಂತ ಮಾಡಿದ್ದಾರೆ. ಸರ್ಕಾರಕ್ಕೆ ಕನಿಷ್ಠ ತಿಳಿವಳಿಕೆಯೂ ಇಲ್ಲ. ನಾಯಕತ್ವ ಭದ್ರಪಡಿಸಿಕೊಳ್ಳಲು‌ ಮುಖ್ಯಮಂತ್ರಿ ಅವರಿಂದ ತುಷ್ಟೀಕರಣ ರಾಜಕೀಯ ನಡೆದಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಲೆಕ್ಷನ್ ಇರಲಿ, ಇರದೇ ಇರಲಿ ತುಷ್ಟೀಕರಣ ನಡೆದೇ ಇದೆ. ಈಗ ಉಪ ಚುನಾವಣೆಯಲ್ಲಿ ಲಾಭ‌ ಪಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.