ಬೆಂಗಳೂರು: ಅವು ಬಿಎಂಟಿಸಿ ಬಸ್ ಇರಲಿ, ಕೆಎಸ್‌ಆರ್‌ಟಿಸಿ ಬಸ್‌ಗಳೇ ಇರಲಿ, ಸಂಚರಿಸುವಾಗ ಪ್ರಯಾಣಿಕರು ಹಾಗೂ ಬಸ್ ಕಂಡಕ್ಟರ್ ಮಧ್ಯೆ ಸಣ್ಣದೊಂದು ಗಲಾಟೆ, ವಾಗ್ವಾದ ಆಗುವುದು ಸಹಜ. ಆದರೆ, ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ 5 ರೂ. ಚಿಲ್ಲರೆ ಕೊಡದೆ, ಅವರ ಮೇಲೆಯೇ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬಿಎಂಟಿಸಿ ಬಸ್ ಕಂಡಕ್ಟರ್‌ನನ್ನು (BMTC Conductor) ಅಮಾನತುಗೊಳಿಸಿದೆ. ಈ ಕುರಿತು ಬಿಎಂಟಿಸಿ ಆದೇಶ ಹೊರಡಿಸಿ ಪ್ರಕಟಣೆ ತಿಳಿಸಿದೆ.
ಆಗಸ್ಟ್ 6ರಂದು ಘಟನೆ ನಡೆದಿದ್ದು, ಕ್ಷಿಪ್ರವಾಗಿ ಬಸ್ ಕಂಡಕ್ಟರ್ ವಿರುದ್ಧ ಬಿಎಂಟಿಸಿ ಕ್ರಮ ತೆಗೆದುಕೊಂಡಿದೆ. ಬಿಎಂಟಿಸಿ ಬಸ್‌ನಲ್ಲಿ ಅಭಿನವ್ ರಾಜ್ ಎಂಬ ಯುವಕ ಪ್ರಯಾಣಿಸುತ್ತಿದ್ದರು. ಅವರು 15 ರೂ. ಟಿಕೆಟ್‌ಗೆ 20 ರೂ. ನೀಡಿದ್ದರು. 5 ರೂ. ಚಿಲ್ಲರೆ ವಾಪಸ್ ಕೇಳಿದಾಗ ಪ್ರಯಾಣಿಕನ ಮೇಲೆ ಕಂಡಕ್ಟರ್ ರೇಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದೇ ಕೋಪದಲ್ಲಿ ಕಂಡಕ್ಟರ್ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೊ ಮಾಡಿಕೊಂಡಿದ್ದ ಅಭಿನವ್ ರಾಜ್, ಬಿಎಂಟಿಸಿಗೆ ದೂರು ನೀಡಿದ್ದರು. ಅದರಂತೆ, ಅಮಾನತು ಮಾಡಲಾಗಿದೆ.